ಸಿದ್ದಾಪುರ, ಏ. 5: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಮೂರ್ನಾಡುವಿನಲ್ಲಿ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವಿತ್ರ ಕುಂಞಪ್ಪ ಚಾಲನೆ ನೀಡಿ ಗೌತಮ್ ಫ್ರೆಂಡ್ಸ್ ಸಂಘದವರು ವಾಲಿಬಾಲ್ ಕ್ರೀಡಾಪಟುಗಳನ್ನು ಮುಂದೆ ತರುವ ಪ್ರಯತ್ನ ನಡೆಸಿರುವದಾಗಿ ಶ್ಲಾಘಿಸಿದರು.

ಸಮಾರಂಭದಲ್ಲಿ ಪ್ರೀಮಿಯರ್ ಲೀಗ್ ಸಂಘದ ಕಾರ್ಯದರ್ಶಿ ಅಬ್ದುಲ್ ರೆಹಮಾನ್ (ಅಂದಾಯಿ) ಮಾತನಾಡಿದರು.

ಪ್ರೀಮಿಯರ್ ಲೀಗ್ ಸಂಘದ ಅಧ್ಯಕ್ಷ ಬಲ್ಲಚಂಡ ಗೌತಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂದ್ಯಾಟಕ್ಕೆ ಜಿಲ್ಲೆಯ 8 ತಂಡಗಳು ಭಾಗವಹಿಸಿವೆ. ಬಿಡ್ಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ನೀಡಲಾಗಿದೆ. ಪ್ರತಿ ಪಂದ್ಯಾಟವು 25 ಅಂಕಗಳಿಂದ ಕೂಡಿದ್ದು ಮೂರು ಸುತ್ತಿನ ಪಂದ್ಯಗಳಾಗಿರುತ್ತದೆ. ಪ್ರಥಮ ಬಹುಮಾನ 40 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 25 ಸಾವಿರ ರೂ. ನಗದು ಮತ್ತು ಟ್ರೋಫಿ, 3 ಮತ್ತು 4ನೇ ಸ್ಥಾನ ಗಳಿಸಿದ ತಂಡಗಳಿಗೆ ತಲಾ 10 ಸಾವಿರ ರೂ. ನಗದು ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯತಿ ಸದಸ್ಯ ಸಾದಿಕ್, ನಿವೃತ್ತ ಸೈನಿಕ ವಾಮನ್, ಸ್ಥಳೀಯರಾದ ಮುಜೀಬ್, ಕೊಟ್ಟಮುಡಿ ಹಾರಿಸ್, ಪಳಂಗಪ್ಪ, ಅಪ್ಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.

ತಾ. 6ರಂದು (ಇಂದು) ಸಮಾರೋಪ ಸಮಾರಂಭ ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಉದ್ಘಾಟನೆ ಮಾಡಲಿದ್ದು, ಪ್ರೀಮಿಯರ್ ಲೀಗ್ ಸಂಘದ ಅಧ್ಯಕ್ಷ ಬಲ್ಲಚಂಡ ಗೌತಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಹರೀಶ್ ಬೋಪಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಸೌಕತ್ ಅಲಿ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.