*ಗೋಣಿಕೊಪ್ಪಲು, ಏ.5: ಪಟ್ಟಣದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಖಾಸಗಿ ಸಂಸ್ಥೆಯವರಿಗೆ ಕಸ ವಿಲೇವಾರಿ ಗುತ್ತಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾ.ಪಂ ಮುಂದಾಗಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಒತ್ತಾಯಿಸಲಾಯಿತು.ಇಲ್ಲಿನ ಕಾಮತ್ ನವಮಿ ಸಭಾಂಗಣದಲ್ಲಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಗ್ರಾ.ಪಂ. ಕ್ಲೀನ್ ಕೂರ್ಗ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕಸ ವಿಲೇವಾರಿ ಸಮಸ್ಯೆ ಪಟ್ಟಣದಲ್ಲಿ ಬಗೆಹರಿಯುವಂತೆ ಕಾಣುತ್ತಿಲ್ಲ. ಪಂಚಾಯ್ತಿ ಆಡಳಿತದ ಒಳರಾಜಕೀಯ ಅಭಿವೃದ್ಧಿಗೆ ತೊಡಕಾಗುತ್ತಿದೆ. ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಪಂಚಾಯ್ತಿಗೆ ಸಾಧ್ಯ ವಾಗದಿದ್ದರೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡಲಿ. ಈ ಬಗ್ಗೆ ವಿಶೇಷ ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು. ಗೋಣಿಕೊಪ್ಪ ಗ್ರಾ.ಪಂ. ಪಾಲಿಬೆಟ್ಟ ಪಂಚಾಯ್ತಿಯನ್ನು ಮಾದರಿಯಾಗಿಸಿ ಕೊಂಡು ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಕಸದ ಸಮಸ್ಯೆ ಶೇ.70 ರಷ್ಟು ಮುಕ್ತಿ ಕಾಣುತ್ತದೆ. ಈ ಬಗ್ಗೆ ಗ್ರಾ.ಪಂ. ಕ್ರಮ ಕೈಗೊಂಡರೂ ನಿರ್ಲಕ್ಷ್ಯದಿಂದ ಜಾರಿಗೆ ತಂದ ನಿಯಮ ಸಡಿಲಗೊಂಡಿದೆ. ಪಂಚಾಯ್ತಿಯ ರಾಜಕೀಯ ಗೊಂದಲದಿಂದ ಕಸ ವಿಲೇವಾರಿಗೆ ತೊಡಕಾಗುತ್ತಿದೆ. ಖಾಸಗಿ ಸಂಸ್ಥೆಯವರಿಗೆ ವಿಲೇವಾರಿ ಮಾಡಲು ಗುತ್ತಿಗೆ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ಇದಕ್ಕೆ ಪಂಚಾಯ್ತಿ ಸದಸ್ಯರುಗಳು ಭಾಗಿಯಾಗದಿರುವದೆ ಉತ್ತಮ ಎಂದು

(ಮೊದಲ ಪುಟದಿಂದ) ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪೂರಕವಾಗಿ ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಜಪ್ಪು ಧ್ವನಿಗೂಡಿಸಿ ಕ್ಲೀನ್ ಕೂರ್ಗ್ ಸಂಸ್ಥೆ ನೀಡಿದ ಸಲಹೆಯನ್ನು ಶ್ಲಾಘಿಸಿದರು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವ ಬಗ್ಗೆ ಪಂಚಾಯ್ತಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇತರ ಸಂಸ್ಥೆಗಳು ಇದಕ್ಕೆ ಕೈ ಜೋಡಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ತಿಳಿಸಿದರು.

ಗ್ರಾ.ಪಂ. ಸದಸ್ಯ ರಾಮಕೃಷ್ಣ ಮಾತನಾಡಿ, ಪಂಚಾಯ್ತಿ ಸದಸ್ಯರಲ್ಲಿ ಎರಡೂ ಪಕ್ಷದ ತಲಾ ಮೂರು ಸದಸ್ಯರನ್ನು ಆಯ್ಕೆ ಮಾಡಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ನಿರ್ವಹಿಸಿದರೆ ಉತ್ತಮ. ಇತರರು ಈ ವಿಚಾರವಾಗಿ ಮೂಗು ತೂರಿಸದೆ ದೂರವಿರಲಿ. ಹೀಗಾದಾಗ ಮಾತ್ರ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುತ್ತದೆ ಎಂದು ಸಲಹೆ ನೀಡಿದರು.

ಮಾಜಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಮಾತನಾಡಿ, ಇಲ್ಲಿನ ವಾತಾವರಣ ಹದಗೆಡುತ್ತಿದೆ. ಅಲ್ಲಲ್ಲಿ ಬಿದ್ದ ಕಸಗಳಿಂದ ರೋಗ ಹರಡುವ ಭೀತಿ ಎದುರಾಗಿದೆ. ಪಟ್ಟಣದ ನಾಲ್ಕು ಮೂಲೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಪಂಚಾಯ್ತಿ ನಿದ್ರಾವಸ್ಥೆಯಲ್ಲಿದೆ. ಹೊರ ಊರುಗಳಿಂದ ಕಸವನ್ನು ತಂದು ಪಟ್ಟಣದಲ್ಲಿ ಹಾಕಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡರೆ ಪಟ್ಟಣದಲ್ಲಿನ ಕಸದ ಸಮಸ್ಯೆ ಶೇ.50ರಷ್ಟು ಪರಿಹಾರ ಕಂಡುಕೊಳ್ಳುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರತಿ ಅಚ್ಚಪ್ಪ, ಸುರೇಶ್ ರೈ, ಅತ್ತೂರು ಗ್ರಾ.ಪಂ. ಅಧ್ಯಕ್ಷೆ ಆಶಾಲತಾ ಉಪಸ್ಥಿತರಿದ್ದರು.