ಪೊನ್ನಂಪೇಟೆ, ಏ. 5: 110ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವನ್ನು ಕೇಂದ್ರ ಸರಕಾರ ರಾಷ್ಟ್ರೀಯ ದಾಸೋಹ ದಿನವನ್ನಾಗಿ ಘೋಷಿಸುವಂತಾಗಲಿ. ಆ ಮೂಲಕ ದಾಸೋಹದಲ್ಲಿ ಕ್ರಾಂತಿಯನ್ನೇ ಮೂಡಿಸಿದ ಕಾಯಕಯೋಗಿ ಸಿದ್ಧಗಂಗಾ ಶ್ರೀಗಳ ಆದರ್ಶ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಾಗಲಿ ಎಂದು ವೀರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರೂ ಆಗಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಎಸ್. ಸುರೇಶ್ ಹೇಳಿದರು.

ಮಾಯಮುಡಿ ಸಮೀಪದ ಧನುಗಾಲದ ಶ್ರೀ ಮುರುಡೇಶ್ವರ ದೇವಸ್ಥಾನದಲ್ಲಿ ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿರುವ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ 110ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಗಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಗಳು ಸಿದ್ಧಗಂಗಾ ಮಠದಲ್ಲಿ ಜ್ಞಾನ, ಅನ್ನ, ಆಶ್ರಯ ದಾಸೋಹವನ್ನು ನಿರಂತರವಾಗಿ ಮಾಡುತ್ತಾ ನಾಡಿನ ಲಕ್ಷಾಂತರ ಮಂದಿಯ ಬಾಳಿಗೆ ಬೆಳಕು ನೀಡಿದವರಾಗಿದ್ದಾರೆ. ಪ್ರಶಸ್ತಿ ಮತ್ತು ಬಿರುದುಗಳಿಗೂ ಮೀರಿದ ಸಮಾಜಸೇವೆ ಮಾಡಿರುವ ಶ್ರೀಗಳು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಶತಾಯುಷಿಗಳಾಗಿದ್ದರೂ ಇಂದಿಗೂ ದಾಸೋಹದತ್ತ ಹೆಚ್ಚು ಒಲವು ಹೊಂದಿರುವ ಸಿದ್ಧಗಂಗಾ ಸ್ವಾಮೀಜಿಗಳು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಸಮಸ್ತ ಭಾರತದ ಆಸ್ತಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಗಳ ಹುಟ್ಟುಹಬ್ಬವನ್ನು ರಾಷ್ಟ್ರೀಯ ದಾಸೋಹ ದಿನವನ್ನಾಗಿ ಆಚರಿಸುವಂತಾಗಲು ರಾಜ್ಯ ಸರಕಾರ ಕೇಂದ್ರಕ್ಕೆ ಒತ್ತಡ ಹೇರಬೇಕಿದೆ. ಇದನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಪಾತ್ರ ಬಹಳಷ್ಟಿದ್ದು, ಇದನ್ನು ಪೂರೈಸಲು ಉಭಯ ಸರಕಾರಗಳು ಇನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸುರೇಶ್ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುರುಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಪಿ. ವೀರಪ್ಪ ಅವರು ಮಾತನಾಡಿ, ಆಧ್ಯಾತ್ಮಕ್ಕೂ ಮೀರಿದ ವ್ಯಕ್ತಿತ್ವ ಹೊಂದಿರುವ ಸಿದ್ಧಗಂಗಾ ಶ್ರೀಗಳ ಬದುಕೆ ಜನತೆಗೆ ಸ್ಪೂರ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ ಕಳೆದ 3 ವರ್ಷ ಗಳಿಂದ ಸತತವಾಗಿ ದೇವಸ್ಥಾನದಲ್ಲಿ ಶ್ರೀಗಳ ಹುಟ್ಟುಹಬ್ಬದಂದು ವಿಶೇಷ ಪೂಜೆ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ವಾಮೀಜಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸ ಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.

ವಿಶೇಷ ಪೂಜಾ ಸಂದರ್ಭದಲ್ಲಿ ಪ್ರಮುಖರಾದ ಎಸ್.ಪಿ. ಮರಿಸ್ವಾಮಿ, ಜೆ.ವಿ. ಗುರುಹೇಮಂತ್, ಎಸ್.ಪಿ. ಮೋಹನ್‍ಚಂದ್ರ, ಎಸ್.ಎಸ್. ರಘು, ಎಸ್.ಎಸ್. ನರೇಂದ್ರ, ಅನಿತಾ ಸುರೇಶ್, ಅರ್ಪಿತಾ ಸುರೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.