ಶನಿವಾರಸಂತೆ, ಏ. 5: ಸ್ಥಳೀಯ ಗ್ರಾ.ಪಂ. ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ದೂರು ಸಲ್ಲಿಸಿದೆ. ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಜಿಲ್ಲಾಧಿಕಾರಿಗಳು 2 ಏಕರೆ ಜಾಗ ಮಂಜೂರು ಮಾಡಿದ್ದರೂ, ಗ್ರಾ.ಪಂ.ನಿಂದ ಪುನಃ ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ಕಸ ಸುರಿಯುತ್ತಿರುವ ಬಗ್ಗೆ ವಿರೋಧಿಸಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿರುವ ಮನವಿಯ ಪ್ರತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಅರ್ಪಿಸಲಾಯಿತು.

ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಕಸವನ್ನು ಸರಕಾರಿ ಆರೋಗ್ಯ ಕೇಂದ್ರ, ಶಾಲೆಗಳು ಇರುವ 1ನೇ ವಿಭಾಗದಲ್ಲಿ ತಂದು ಸುರಿಯುತ್ತಿದ್ದಾರೆ. ಇದರ ಪಕ್ಕದಲ್ಲೇ ಹೊಳೆಯು ಹರಿಯುತ್ತಿದ್ದು, ತ್ಯಾಜ್ಯ ವಸ್ತು ನೀರಿಗೆ ಸೇರುತ್ತಿದೆ. ದನ-ಕರುಗಳು ಕುಡಿದು ಸಾವನ್ನಪ್ಪುತ್ತಿದೆ. ಪಕ್ಕದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗಮನ ಸೆಳೆದರು.

ಭಾರತ ಸರಕಾರದ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಬೇಗನೆ ಕ್ರಮ ಕೈಗೊಳ್ಳಬೇಕಾಗಿ ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡಿದ ಪ್ರತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಭಿವೃದ್ಧಿ ಅಧಿಕಾರಿಗೆ ನೀಡಲಾಯಿತು. ಕ.ರ.ವೇ. ಪ್ರಮುಖರಾದ ಫ್ರಾನ್ಸಿಸ್ ಡಿಸೋಜ, ಪ್ರವೀಣ್ ಕುಮಾರ್, ಶರತ್, ಅರುಣ್ ಕುಮಾರ್, ಧರ್ಮ, ನವೀನ್ ಇತರರು ಉಪಸ್ಥಿತರಿದ್ದರು.