ಆಲೂರುಸಿದ್ದಾಪುರ/ಒಡೆಯನಪುರ: ಏ. 5: ‘ಸಿದ್ದಗಂಗೆ ಮಠದ ಡಾ.ಶಿವಕುಮಾರಸ್ವಾಮೀಜಿ ಅವರು ಸಮಾಜದ ಉದ್ಧಾರ, ದೀನ-ದಲಿತರ ಶ್ರೇಯೋಭಿವೃದ್ಧಿ, ಶಿಕ್ಷಣ, ದಾಸೋಹ ಮುಂತಾದ ಬಹುಮುಖ ಸುಧಾರಣೆಗಾಗಿ ಜನ್ಮತಾಳಿದ ಆಧುನಿಕ ಯುಗದ ಮಹಾನ್ ಸಂತ ರಾಗಿದ್ದಾರೆ’ ಎಂದು ಚಿಕ್ಕಮಗಳೂರಿನ ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯ ಪಟ್ಟರು. ಅವರು ಸಮಿಪದ ಕೊಡ್ಲಿಪೇಟೆ ಕಲ್ಲುಮಠದ ಶಾಲಾ ಆವರಣದಲ್ಲಿ ತುಮಕೂರು ಸಿದ್ದಗಂಗೆ ಮಠದೀಶ ಡಾ.ಶಿವಕುಮಾರಸ್ವಾಮೀಜಿ ಅವರ 110ನೇ ಜನ್ಮದಿನಾಚರಣೆ ಅಂಗವಾಗಿ ಮಠದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶ್ರೀಗಳ ಆದರ್ಶ, ತತ್ವ-ಸಿದ್ದಾಂತ ಸಮಾಜ, ಶಿಕ್ಷಣದ ಪ್ರಗತಿಯ ಚಿಂತನೆ, ಆದ್ಯಾತ್ಮಿಕ ಚಿಂತನೆ, ಮಾನವಿಯ ಮೌಲ್ಯ ಮುಂತಾದ ವಿಚಾರಧಾರೆ ಗಳನ್ನು ನಾವೆಲ್ಲರೂ ಕಿಂಚಿತ್ತಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸ ಬೇಕಾಗಿದೆ ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 9ನೇ ಶತಮಾನದ ತರುವಾಯ 21ನೇ ಶತಮಾನದಲ್ಲಿ ಶರಣರು ಸಮಾಜದ ಸುಧಾರಣೆ; ಅಭಿವೃದ್ಧಿಯಾಗುವದಕ್ಕೆ ಸಿದ್ದಗಂಗೆ ಮಠಾದೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಸಾಕ್ಷಿಯಾಗಿದ್ದಾರೆ ಎಂದರು. ಶ್ರೀಗಳು ಸಮಾಜದ ಉದ್ಧಾರಕ್ಕಾಗಿ ಸಲ್ಲಿಸಿರುವ ಸೇವೆ ಇನ್ನೂ 9 ಶತಮಾನ ಕಳೆದರೂ ಸಹ ನೆನೆಪಿನಲ್ಲಿ ಉಳಿಯುತ್ತದೆ, ಇಂತಹ ಮಹಾನ್ ಶರಣರು ಸಮಾಜದ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ದೇಶಕ್ಕೆ ಮಾದರಿಯಾಗಿದ್ದಾರೆ. ಶ್ರೀಗಳ ಆದರ್ಶ ಬದುಕಿನ ಬಗ್ಗೆಯೇ ಇಂದಿನ ವಿದ್ಯಾರ್ಥಿಗಳು ಪಿಎಚ್‍ಡಿ ಮಾಡಬಹುದಾಗಿದೆ ಎಂದರು.

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿದರು. ಕಲ್ಲುಮಠದ ಮಹಾಂತ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ದರು.

ಕಾರ್ಯಕ್ರಮದಲ್ಲಿ ಊರುಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ವೀರಶೈವ ಸಮಾಜದ ಪ್ರಮುಖರಾದ ಜಿ.ಎಂ. ಕಾಂತರಾಜು, ಸಿ.ವಿ. ವಿಶ್ವನಾಥ್, ಡಿ.ಬಿ. ಸೋಮಪ್ಪ, ಕೆ.ವಿ. ಮಂಜುನಾಥ್, ಬಿಇಒ ಮಲ್ಲೇಸ್ವಾಮಿ, ಎಚ್.ಎಸ್. ಪ್ರೇಮ್‍ನಾಥ್, ಕೊಡ್ಲಿಪೇಟೆ ವೀರಶೈವ ಸಮಾಜದ ಪದಾಧಿಕಾರಿಗಳು ಮುಂತಾದವರು ಇದ್ದರು.

ಗುರುವಂದನಾ ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ಪಟ್ಟಣದ ಕಡೆಪೇಟೆ ಗಣಪತಿ ದೇವಾಲಯದಿಂದ ಡಾ. ಶಿವಕುಮಾರಸ್ವಾಮೀಜಿಗಳ ಭಾವಚಿತ್ರ ಹಾಗೂ ಹರಗೂರು ಚರಮೂರ್ತಿ ಗಳೊಂದಿಗೆ ಕಲ್ಲುಮಠದ ಶಾಲಾ ಆವರಣದ ತನಕ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು. ನಂದಿಧ್ವಜ, ವೀರಗಾಸೆ ಕುಣಿತ ಮತ್ತು ಮಂಗಳ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.