ಗೋಣಿಕೊಪ್ಪಲು, ಏ. 5: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿರುದನ್ನು ತೆರವುಗೊಳಿಸಬೇಕು ಎಂದು ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ ಉದ್ಯಾನವನ, ದುಬಾರೆ ಆನೆ ಶಿಬಿರ ಮತ್ತು ರಿವರ್ ರ್ಯಾಫ್ಟಿಂಗ್‍ಗಳನ್ನು ನವೀಕರಿಸುವ ಸಲುವಾಗಿ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಪ್ರವಾಸೋದ್ಯಮವನ್ನೇ ನಂಬಿರುವ ಐನೂರಕ್ಕೂ ಹೆಚ್ಚು ಹೊಟೇಲುಗಳಿಗೆ ಮತ್ತು ಹೋಂ ಸ್ಟೇ ಅಲ್ಲದೆ ಐನೂರಕ್ಕೂ ಹೆಚ್ಚು ಪ್ರವಾಸಿ ವಾಹನ ಚಾಲಕರಿಗೆ ಮತ್ತು ಹಲವಾರು ವರ್ಷಗಳಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವವರಿಗೆ ಅನಾನುಕೂಲವಾಗಿದೆ. ಪ್ರವಾಸಿಗರಿಗೂ ಇದರಿಂದ ಬಹಳಷ್ಟು ಅನಾನುಕೂಲತೆ ಉಂಟಾಗಿದೆ.

ಶಾಲಾ-ಕಾಲೇಜುಗಳ ಪರೀಕ್ಷಾ ಸಮಯ ಮುಗಿದು ಇದೀಗ ಜಿಲ್ಲೆಗೆ ಪ್ರವಾಸಿಗರು ಭೇಟಿ ಕೊಡುವ ಈ ಸಂದರ್ಭ ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಚ್ಚಿದರೆ ಪ್ರವಾಸಿಗರಿಗೆ ಮತ್ತು ಪ್ರವಾಸಗಳನ್ನು ಆಯೋಜಿಸುವವರಿಗೆ ತಪ್ಪು ಮಾಹಿತಿ ರವಾನೆಯಾಗುವ ಅವಕಾಶವಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುವ ಸಾದ್ಯತೆ ಇದೆ.

ಈ ಬಗ್ಗೆ ಜಿಲ್ಲಾಧಿಕಾರಿ ರಿಚರ್ಡ್ ವಿಸ್ಸೆಂಟ್ ಡಿಸೋಜ ಅವರನ್ನು ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮತ್ತು ಸಂಘದ ಸದಸ್ಯರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಮೊದಲಿಗೆ ನಿಸರ್ಗಧಾಮಕ್ಕೆ ಭೇಟಿ ನೀಡಿದ ಸಂಘದ ಸದಸ್ಯರಿಗೆ ಅರಣ್ಯಾಧಿಕಾರಿಗಳು ತಾ. 5 ರಿಂದ ನಿಸರ್ಗಧಾಮವನ್ನು ಪ್ರವಾಸಿಗರಿಗೆ ಮುಕ್ತ ಪ್ರವೇಶ ನೀಡುವ ಭರವಸೆ ನೀಡಿದರು. ಹಾರಂಗಿ ಜಲಾಶಯದ ಅಧಿಕಾರಗಳನ್ನು ಭೇಟಿ ಮಾಡಿದ ತಂಡ ಸಮಸ್ಯೆಯನ್ನು ತಿಳಿಸಿದಾಗ ಅವರು ಜಲಾಶಯಕ್ಕೆ ಪ್ರವಾಸಿಗರಿಗೆ ಮುಕ್ತ ಪ್ರವೇಶಾವಕಾಶ ನೀಡುವದಾಗಿ ತಿಳಿಸಿದರು. ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, (ಪ್ರಬಾರ ಜಿಲ್ಲಾಧಿಕಾರಿ) ಚಾರುಲತಾ ಸೋಮಲ್, ಅರಣ್ಯಾಧಿಕಾರಿಗಳಾದ ಸೂರ್ಯಸೇನ್ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಗನ್ನಾಥ್ ಅವರನ್ನು ಭೇಟಿ ಮಾಡಿ ಸಮಸ್ಯೆಯ ಕುರಿತು ಚರ್ಚಿಸಿದರು.

ಭೇಟಿಯ ಸಂದರ್ಭ ಸಂಘದ ಉಪಾಧ್ಯಕ್ಷ ಜಾಹಿರ್, ಖಜಾಂಚಿ ಭಾಸ್ಕರ್, ಮಾಜಿ ಅಧ್ಯಕ್ಷ ಜಿ.ವಿ. ಕೋಟಿ, ಸದಸ್ಯರಾದ ಸಿದ್ದಲಿಂಗೇಶ್, ದಿನೇಶ್, ಬಷೀರ್, ಸರೀನ್, ಚಂದ್ರಶೇಖರ್, ರತೀಶ್, ಗಿರೀಶ್, ಸಮೀರ್, ಸಲಾಮ್, ಸಚಿನ್ ಮತ್ತು ಶಜೀರ್ ಉಪಸ್ಥಿತರಿದ್ದರು.