ಮಡಿಕೇರಿ, ಏ. 5: ಜಿಲ್ಲೆಯಲ್ಲಿ ಕಳೆದ 5-6 ವರ್ಷಗಳಿಂದ ಸತತ ಏರಿಕೆ ದಾಖಲಿಸಿದ್ದ ನೂತನ ವಾಹನಗಳ ನೋಂದಣಿ ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ 2016-17 ನೇ ಹಣಕಾಸು ವರ್ಷದಲ್ಲಿ ಶೇಕಡಾ 10 ರಷ್ಟು ಕುಸಿತ ದಾಖಲಿಸಿದೆ. ಪ್ರಾದೇಶಿಕ ಸಾರಿಗೆ ಕಚೇರಿಯ ಅಂಕಿ ಅಂಶಗಳ ಪ್ರಕಾರ 2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 10,827 ನೂತನ ವಾಹನಗಳು ನೋಂದಣಿ ಆಗಿದ್ದರೆ ಕಳೆದ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 9982 ಕ್ಕೆ ಕುಸಿದಿದೆ.

ನೂತನ ವಾಹನಗಳ ನೋಂದಣಿಯಲ್ಲಿ ದ್ವಿಚಕ್ರ ವಾಹನಗಳ ಪಾಲು ಪ್ರತೀ ವರ್ಷವೂ ಶೇಕಡಾ 60 ಕ್ಕಿಂತ ಅಧಿಕವಾಗಿದ್ದು, ಕಳೆದ ವರ್ಷದಲ್ಲಿ 6480 ದ್ವಿಚಕ್ರ ವಾಹನಗಳು ನೋಂದಾವಣೆ ಆಗಿದ್ದು, ಹಿಂದಿನ ವರ್ಷ ಒಟ್ಟು 7285 ದ್ವಿಚಕ್ರ ವಾಹನಗಳು ನೋಂದಣಿ ಆಗಿದ್ದವು. ದ್ವಿಚಕ್ರ ವಾಹನಗಳ ಹಾಗೂ ಇತರ ವಾಹನಗಳ ನೋಂದಣಿಯಲ್ಲಿ ಕುಸಿತ ದಾಖಲಿಸಿದ್ದರೂ ಕಾರುಗಳ ನೋಂದಾವಣೆಯಲ್ಲಿ ಏರಿಕೆ ಆಗಿರುವದು ಅಚ್ಚರಿ ಮೂಡಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 2497 ನೂತನ ಕಾರುಗಳು ನೋಂದಣಿ ಆಗಿದ್ದರೆ ಈ ವರ್ಷ 2730 ನೂತನ ಕಾರುಗಳು ನೋಂದಾಯಿಸಲ್ಪಟ್ಟಿವೆ. ಈ ವರ್ಷ ಸುಮಾರು 117 ಕಾರುಗಳು ಹೆಚ್ಚಾಗಿವೆ. ಕಳೆದ ಹಣಕಾಸು ವರ್ಷದಲ್ಲಿ 672 ನೂತನ ಆಟೋರಿಕ್ಷಾಗಳು ನೋಂದಣಿ ಆಗಿದ್ದರೆ ಈ ವರ್ಷ 565 ನೂತನ ಆಟೋ ರಿಕ್ಷಾಗಳು ಮಾತ್ರ ನೋಂದಣಿ ಆಗಿವೆ.

ಜಿಲ್ಲೆಯಲ್ಲಿ 2015-16 ನೇ ಸಾಲಿನಲ್ಲಿ 1457 ವಾಣಿಜ್ಯ ವಾಹನಗಳು ನೋಂದಾವಣೆ ಆಗಿದ್ದು, ಈ ವರ್ಷ 1368 ವಾಹನಗಳು ಮಾತ್ರ ನೋಂದಾವಣೆಗೊಂಡಿವೆ. ಕಳೆದ ಹಣಕಾಸು ವರ್ಷದಲ್ಲಿ 427 ಲಘು ವಾಣಿಜ್ಯ ವಾಹನಗಳು ನೋಂದಣೆ ಆಗಿದ್ದು, ಈ ವರ್ಷ ಈ ಸಂಖ್ಯೆ 323 ಕ್ಕೆ ಇಳಿಕೆ ಕಂಡಿದೆ.

2015-16 ನೇ ಸಾಲಿನಲ್ಲಿ ಸಾರಿಗೆ ಇಲಾಖೆಯು 3946 ಲಕ್ಷ ರೂಪಾಯಿಗಳ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದ್ದು, ಒಟ್ಟು 4676 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ಶೇಕಡಾ 118 ರಷ್ಟು ಗುರಿ ಮೀರಿ ಸಾಧನೆ ಮಾಡಿದೆ. ಈ ವರ್ಷ 4750 ಲಕ್ಷ ರೂಪಾಯಿಗಳ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು ಒಟ್ಟು 5150 ಲಕ್ಷ ರೂಪಾಯಿಗಳ ತೆರಿಗೆ ಸಂಗ್ರಹ ಮಾಡಿದ್ದು, ಶೇಕಡಾ 108 ರಷ್ಟು ಗುರಿ ಮೀರಿ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ ಕಳೆದ ಮಾರ್ಚ್ 31 ಕ್ಕೆ ಒಟ್ಟು ಎಲ್ಲಾ ಮಾದರಿಯ 1,60,999 ವಾಹನಗಳು ಇದ್ದು ಇವುಗಳಲ್ಲಿ 78,903 ದ್ವಿಚಕ್ರ ವಾಹನಗಳು ಆಗಿವೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ 5,54,519 ಆಗಿದ್ದು ಪ್ರತೀ 3.44 ಜನರಿಗೆ ಒಂದು ವಾಹನ ಇದ್ದಂತೆ ಆಗಿದೆ.

ಈ ವರದಿಗಾರನೊಂದಿಗೆ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿ ಸೋಜ ಅವರು ಕೇಂದ್ರ ಸರ್ಕಾರವು ರೂ 500 ಹಾಗೂ 1000 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದರಿಂದಾಗಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ನೂತನ ವಾಹನ ನೋಂದಾವಣೆಯಲ್ಲಿ ಕುಸಿತ ದಾಖಲಿಸಿದ್ದರೂ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನೋಂದಣಿ ಹೆಚ್ಚಳ ದಾಖಲಿಸಿರುವದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಆನ್‍ಲೈನ್ ಮೂಲಕ ತರಬೇತು ಲೈಸನ್ಸ್, ಹಾಗೂ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದ್ದು ಇಲಾಖೆ ಜನ ಸ್ನೇಹಿ ಆಗಲಿದೆ ಎಂದು ಹೇಳಿದರು.

- ಕೋವರ್ ಕೊಲ್ಲಿ ಇಂದ್ರೇಶ್