ಮಡಿಕೇರಿ, ಏ. 5: ಪ್ರತಿ ವರ್ಷದ ಚಾಲ್ತಿ ಸಾಲಿನ ತೆರಿಗೆ ಏಪ್ರಿಲ್ ತಿಂಗಳಲ್ಲಿ ಪಾವತಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಆಸ್ತಿ ತೆರಿಗೆಯನ್ನು ದಂಡವಿಲ್ಲದೆ ಪಾವತಿಸಲು ಪ್ರತಿ ವರ್ಷ ಮೇ ಮತ್ತು ಜೂನ್ 30 ಅಂತಿಮ ದಿನಾಂಕವಾಗಿದೆ. ಜುಲೈ ತಿಂಗಳಿನಿಂದ ಪಾವತಿಸಿದ್ದಲ್ಲಿ, ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳಿಗೆ ಶೇ. 2 ರಷ್ಟು ದಂಡ ಪಾವತಿಸಬೇಕಾಗುತ್ತದೆ. 2017- 18ನೇ ಸಾಲಿನ ಗೃಹ ಬಳಕೆ ನೀರಿನ ಶುಲ್ಕ ಪ್ರತಿ ಮಾಹೆಗೆ ರೂ..100 ವಾಣಿಜ್ಯ, ಕೈಗಾರಿಕಾ ಬಳಕೆಗೆ ಮಾಹೆಯಾನ ರೂ. 400 ನೀರಿನ ತೆರಿಗೆಯನ್ನು ನಿಗಧಿಪಡಿಸಲಾಗಿದೆ. ಆದ್ದರಿಂದ ಪ್ರತಿ ತಿಂಗಳು ನೀರಿನ ತೆರಿಗೆ ಪಾವತಿಸತಕ್ಕದ್ದು. ತಪ್ಪಿದ್ದಲ್ಲೂ ಪ್ರತಿ ಶೇ. 5 ದಂಡ ವಿಧಿಸಲಾಗುವದು.

2017-18ನೇ ಸಾಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ಕಚೇರಿಯಿಂದ ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆಯಬೇಕು. ಪರವಾನಿಗೆ ಪಡೆಯದೇ, ನವೀಕರಿಸದೇ ವ್ಯಾಪಾರ ನಡೆಸುತ್ತಿದ್ದಲ್ಲೂ ಅಂತಹ ವ್ಯಾಪಾರಸ್ಥರಿಗೆ ಗರಿಷ್ಠ ಶೇ. 25 ದಂಡವನ್ನು ವಿಧಿಸಲಾಗುವದು. ಮತ್ತು ಪರವಾನಿಗೆ ರಹಿತ ಉದ್ದಿಮೆದಾರರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವದು.

2017-18 ನೇ ಸಾಲಿನಿಂದ ಜಾರಿಗೆ ಬರುವಂತೆ, ಜಾಹೀರಾತು ಕರವನ್ನು ನಿಗದಿಪಡಿಸಿದ್ದು, ದರಗಳಿಗೆ ಅನುಗುಣವಾಗಿ, ಕಡ್ಡಾಯವಾಗಿ ಪಟ್ಟಣ ಪಂಚಾಯಿತಿಯಿಂದ ಪರವಾನಿಗೆ ಪಡೆದುಕೊಂಡು ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ಪಾವತಿ ಮಾಡಬೇಕಾದ ನೀರಿನ ತೆರಿಗೆ, ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಘನತಾಜ್ಯ ಶುಲ್ಕ ಹಾಗೂ ಇತರೆ ಎಲ್ಲಾ ತೆರಿಗೆಗಳನ್ನು ಸಕಾಲದಲ್ಲಿ ಪಾವತಿಸಿ ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗೆ ಸಹಕರಿಸಲು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣಕುಮಾರ್ ಅವರು ಕೋರಿದ್ದಾರೆ.