ಮಡಿಕೇರಿ, ಏ. 5: ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಜಿಲ್ಲೆಯ 23 ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ (ಪ್ರಬಾರ) ಚಾರುಲತಾ ಸೋಮಲ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಸಂಬಂಧಿಸಿದಂತೆ ತಾಲೂಕು ಹಾಗೂ ಗ್ರಾ.ಪಂ. ಮಟ್ಟದ ನೋಡೆಲ್ ಅಧಿಕಾರಿಗಳ ಜೊತೆ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಡಿಕೇರಿ ತಾಲೂಕಿನ ಎಮ್ಮೆಮಾಡು, ಕಾಂತೂರು-ಮೂರ್ನಾಡು, ಕೋಪಟ್ಟಿ, ಕುಂಜಿಲ, ಮಕ್ಕಂದೂರು, ಮರಗೋಡು, ಬೇತು, ನಾಪೋಕ್ಲು, ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಕೊಡ್ಲಿಪೇಟೆ, ಕೂಡಿಗೆ, ಕುಂಬೂರು, ಮುಳ್ಳುಸೋಗೆ, ಶನಿವಾರಸಂತೆ, ಶ್ರೀಮಂಗಲ, ಸುಂಟಿಕೊಪ್ಪ ಹಾಗೆಯೇ ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಅರುವತೋಕ್ಲು, ನೋಕ್ಯ, ಕುಟ್ಟ, ಮೇಕೂರು-ಹೊಸಕೇರಿ, ಪೊನ್ನಂಪೇಟೆ, ಕರಡಿಗೋಡು ಈ ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ದೀಕರಣ ಘಟಕ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕಾರ್ಡ್ ಪಡೆದು 2 ರೂ. ಗೆ 20 ಲೀಟರ್ ಶುದ್ಧ ಕುಡಿಯುವ ನೀರು ಪಡೆಯ ಬಹುದಾಗಿದೆ ಎಂದು ಚಾರುಲತಾ ಸೋಮಲ್ ತಿಳಿಸಿದರು.

ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಹಾಗೂ ಮೂರು ಗ್ರಾ.ಪಂ.ಗಳಿಗೆ ಒಬ್ಬರಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ತಂಡೋಪಾದಿಯಾಗಿ ಸಮನ್ವಯತೆ ಯಿಂದ ಕಾರ್ಯನಿರ್ವಹಿಸಬೇಕು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು. ಹಾಗೆಯೇ ಪ್ರತೀ ಸೋಮವಾರ ಜಿಲ್ಲಾಧಿಕಾರಿ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಬರ ನಿರ್ವಹಣೆ ಸಂಬಂಧ ನಡೆಯುವ ಸಭೆಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಾಗುತ್ತಿದ್ದು, ಇದನ್ನು ಅರಿತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಕುಡಿಯುವ ನೀರು ಪೂರೈಕೆ ಮಾಡುವದು ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಹಳೆ ಕಾಮಗಾರಿಗಳನ್ನು ಪೂರ್ಣಗೊಳಿಸುವದು, ಟಾಸ್ಕ್ ಫೋರ್ಸ್ ಕಾಮಗಾರಿಗಳು, ವಿದ್ಯುತ್ ಸಂಪರ್ಕ ಕಲ್ಪಿಸುವದು ಹೀಗೆ ವಿವಿಧ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸಬೇಕು. ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರು ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತವೆ. ಅಂತಹ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ತಾಲೂಕು ಮತ್ತು ಗ್ರಾ.ಪಂ. ಮಟ್ಟದ ನೋಡೆಲ್ ಅಧಿಕಾರಿಗಳಿಂದ ಜಿಲ್ಲೆಯ ಸಂಪಾಜೆ, ಬೆಂಗೂರು, ನಾಪೋಕ್ಲು, ನೆಲ್ಲಿಹುದಿಕೇರಿ, ಮಾದಪುರ, ದುಂಡಳ್ಳಿ, ಗೌಡಳ್ಳಿ, ಚೆಟ್ಟಳ್ಳಿ, ದೊಡ್ಡಮಳ್ತೆ, ಸಿದ್ದಾಪುರ ಹೀಗೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರು ಪೂರೈಕೆ, ಟ್ರಾನ್ಸ್‍ಫಾರಂ ಬದಲಾವಣೆ ಸೇರಿದಂತೆ ತಮ್ಮ ತಮ್ಮ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಡಯಟ್ ಪ್ರಾಂಶುಪಾಲ ದೊಡ್ಡ ಮಲ್ಲಪ್ಪ, ಜಿ.ಪಂ. ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ತಾ.ಪಂ. ಇಓಗಳಾದ ಫಡ್ನೇಕರ್, ಸತ್ಯ ನಾರಾಯಣ, ಜೀವನ್ ಕುಮಾರ್, ತಹಶೀಲ್ದಾರರಾದ ಕುಸುಮ, ಕೃಷ್ಣ, ಮಹದೇವಸ್ವಾಮಿ, ಕುಡಿಯುವ ನೀರು ವಿಭಾಗದ ಇಂಜಿನಿಯರ್‍ಗಳಾದ ಇಬ್ರಾಹಿಂ, ಲಕ್ಷ್ಮೀ ರಾಯ್, ರಮೇಶ್, ತೋಟ ಗಾರಿಕೆ ಇಲಾಖೆಯ ಪ್ರಮೋದ್, ಕೃಷಿ ಇಲಾಖೆಯ ರಾಜಶೇಖರ್, ಗಿರೀಶ್ ನಾನಾ ನೋಡೆಲ್ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.

ಬಳಿಕ ಜಿಲ್ಲೆಯ ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತಿದ್ದು, ಕುಡಿಯುವ ನೀರು ಸಂಬಂಧ ಬಾಕಿ ಇರುವ ಕಾಮಗಾರಿಗಳು ಎಷ್ಟು, ಪೂರ್ಣಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಸೂಚನೆ ನೀಡಿದರು. ಜಿಲ್ಲೆಯ ಹಾಡಿಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.