ಕೂಡಿಗೆ, ಏ. 5: ಐತಿಹಾಸಿಕ ಹಿನ್ನೆಲೆಯುಳ್ಳ ಕಾವೇರಿ ನದಿ ದಂಡೆಯ ಕಣಿವೆ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವು ಇಂದು ಶ್ರದ್ದಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷದ ವಾಡಿಕೆಯಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆ ಮೂಲಕ ಬರಮಾಡಿಕೊಂಡ ಗಂಗಾ ತೀರ್ಥವನ್ನು ಅಲಂಕೃತ ಮಂಟಪದಲ್ಲಿ ಕಣಿವೆಯ ಗಡಿಭಾಗಕ್ಕೆ ಮಂಗಳವಾದ್ಯದೊಂದಿಗೆ ತಂದರು.

ಅಲ್ಲಿಂದ ರಾಮಲಿಂಗೇಶ್ವರ ದೇವಾಲಯ ಸಮಿತಿಯವರು ಶಾಸ್ತ್ರೋಕ್ತವಾಗಿ ಗಂಗಾಜಲವನ್ನು ಬರಮಾಡಿಕೊಂಡು ಮಂಗಳವಾದ್ಯದೊಂದಿಗೆ ಕಣಿವೆಯ ಪ್ರಮುಖ ಬೀದಿಗಳ ಮೂಲಕ ದೇವಾಲಯಕ್ಕೆ ತಂದು ರಾಮಲಿಂಗೇಶ್ವರನಿಗೆ ಅಭಿಷೇಕ ಮಾಡಿ ಶ್ರೀ ಸ್ವಾಮಿಗೆ ವಿಶೇಷ ರುದ್ರಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ ವಸಂತಮಾಧವ ಪೂಜೆಯ ಬಳಿಕ ರಥಬಲಿ ನಡೆಯಿತು. ಮಧ್ಯಾಹ್ನ ಸುಮಾರು 1.30 ಗಂಟೆಯ ವೇಳೆಗೆ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರಕಿತು.

ಹೊಸ ವಸ್ತ್ರ ಹಾಗೂ ಹೂಗಳಿಂದ ಅಲಂಕೃತಗೊಂಡ ರಥದಲ್ಲಿ ಸ್ವಾಮಿಯ ವಿಗ್ರಹವನ್ನು

(ಮೊದಲ ಪುಟದಿಂದ) ಇರಿಸಿ ಗ್ರಾಮೀಣ ಸೊಗಡಿನಲ್ಲಿ ನಡೆದ ರಥೋತ್ಸವದ ಸಂದರ್ಭ ಭಕ್ತಾದಿಗಳು ಹಣ್ಣು ಜವುನವನ್ನು ರಥದ ಮೇಲೆ ಎಸೆದು ಭಕ್ತಿಭಾವ ಮೆರೆದರು. ಬಳಿಕ ರಥವು ಮುಖ್ಯರಸ್ತೆಯಲ್ಲಿ ಸಾಗಿ ಗ್ರಾಮದ ಅರಳಿ ಮರದವರೆಗೆ ತೆರಳಿ ನಂತರ ತನ್ನ ಸ್ವಸ್ಥಾನಕ್ಕೆ ಮರಳಿತು. ರಥದ ಮುಂದೆ ಡೊಳ್ಳುಕುಣಿತ, ವೀರಗಾಸೆ, ಚಂಡೆವಾದ್ಯಗಳು ಮೆರವಣಿಗೆಯಲ್ಲಿ ಮೆರುಗು ನೀಡಿದವು.

ಕೊಡಗಿನಲ್ಲಿ ಹಿಂದೂಗಳ ಹೊಸ ವರ್ಷದ ಪ್ರಥಮ ಉತ್ಸವ ಇದಾಗಿದ್ದು, ಬಯಲು ಸೀಮೆಗೆ ಸೇರಿದ ಸಹಸ್ರಾರು ಮಂದಿ ಈ ರಥೋತ್ಸವದಲ್ಲಿ ಪಾಲ್ಗೊಳ್ಳುವದು ಮತ್ತೊಂದು ವಿಶೇಷ. ರಥೋತ್ಸವದಲ್ಲಿ ನೆರೆಯ ಹಾಸನ, ಮೈಸೂರು ಗಡಿ ಜಿಲ್ಲೆಯ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ರಥೋತ್ಸವದ ಬಳಿಕ ನೆರದಿದ್ದ ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು.

ಅರ್ಚಕ ರಾಘವೇಂದ್ರಾಚಾರ್ ಹಾಗು ನರಹರಿಶರ್ಮ ಮತ್ತು ತಂಡವರು ಪೂಜಾ ವಿಧಿ ನೆರವೇರಿಸಿದರು. ಕಣಿವೆಯ ಪ್ರಮುಖ ಬೀದಿಗಳನ್ನು ತಳಿರು ತೋರಣ ಹಾಗೂ ಕೇಸರಿ ಬಣ್ಣದಿಂದ ಸಿಂಗರಿಸಲಾಗಿತ್ತು. ರಥೋತ್ಸವದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮಡಿಕೇರಿ

ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ 27ನೇ ವರ್ಷದ ರಾಮನವಮಿ ಉತ್ಸವ ಮೆರವಣಿಗೆ ಬಳಿಕ ಮಹಾಪೂಜೆ ನೆರವೇರಿತು.

ಪ್ರಸಕ್ತ ಶ್ರೀ ಕೋದಂಡರಾಮ ದೇವಾಲಯದ ಜೀರ್ಣೋದ್ಧಾರಕ್ಕೆ ಪ್ರಾರ್ಥನೆ ಮೂಲಕ ಮುಂದಿನ ರಾಮನವಮಿ ವೇಳೆಗೆ ಕೊಡಗಿನ ಜನತೆ ಹಾಗೂ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕೆಲಸ ಪೂರೈಸಲು ಶ್ರಮಿಸಲಾಗುವದು ಎಂದು ಇದೇ ಸಂದರ್ಭ ಸಂಕಲ್ಪ ಮಾಡಲಾಯಿತು.

ಮೆರವಣಿಗೆ

ಬೆಳಿಗ್ಗೆ ಶ್ರೀ ಸನ್ನಿಧಿಯಲ್ಲಿ ಗಣಪತಿ ಹೋಮ, ರಾಮ ದೇವರಿಗೆ ಅಭಿಷೇಕ, ಅಲಂಕಾರ ಪೂಜೆಗಳೊಂದಿಗೆ ಉತ್ಸವ ಮೂರ್ತಿಯನ್ನು ಮಂಟಪದಲ್ಲಿ ಇರಿಸಿ ಮಹದೇವಪೇಟೆ ಮುಖ್ಯರಸ್ತೆ, ಜನರಲ್ ತಿಮ್ಮಯ್ಯ ವೃತ್ತ ತನಕ ಕ್ರಮಿಸಿ ಖಾಸಗಿ ಬಸ್ ನಿಲ್ದಾಣ, ಗಣಪತಿ ಬೀದಿ ಮೂಲಕ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕಲಶ ಹೊತ್ತ ಮಾತೆಯರು, ಭಜನಾ ತಂಡ, ಕೇರಳದ ಚಂಡೆವಾದ್ಯ ಸಹಿತಿ ಕಲ್ಲಡ್ಕದ ಗೊಂಬೆ ಕುಣಿತ ಈ ಬಾರಿಯ ರಾಮೋತ್ಸವಕ್ಕೆ ಮೆರಗು ನೀಡಿತ್ತು.

ಶ್ರೀ ಕೋದಂಡರಾಮ ಸನ್ನಿಧಿಯಲ್ಲಿ ಮಹಾಪೂಜೆ ಬಳಿಕ ಪಾನಕ ಕೋಸಂಬರಿ ಸಹಿತ ಅನ್ನಸಂತರ್ಪಣೆ ನೆರವೇರಿತು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ಪೇಟೆ ರಾಮಮಂದಿರ

ಇಲ್ಲಿನ ಪೇಟೆ ಶ್ರೀ ರಾಮ ಮಂದಿರದಲ್ಲಿ ರಾಮೋತ್ಸವ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಸೇವೆ, ಮಹಾಪೂಜೆಯೊಂದಿಗೆ ಅನ್ನದಾನ ನೆರವೇರಿತು. ರಾಮನವಮಿ ಪೂಜಾದಿಗಳೊಂದಿಗೆ ದೇವಾಲಯ ಸಮಿತಿ ಪ್ರಮುಖರು ಹಾಜರಿದ್ದರು.

ರಾಮೋತ್ಸವ ಸಮಿತಿ

ರಾಮೋತ್ಸವ ಸಮಿತಿ ಆಶ್ರಯದಲ್ಲಿ ಇಲ್ಲಿನ ಶ್ರೀ ಓಂಕಾರ ಸದನದಲ್ಲಿ ಜರುಗಿದ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಶಿವಶಕ್ತಿ ಮಹಿಳಾ ವೃಂದದಿಂದ ಶ್ರೀ ರಾಮರಕ್ಷಾ ಸೋತ್ರ ಹಾಗೂ ಭಗವದ್ಗೀತೆ ಪಠನ ನಡೆಯಿತು. ಸಂಜೆ ವಿದುಷಿ ಪುತ್ತೂರಿನ ಸುಚಿತ್ರ ಹೊಳ್ಳರಿಂದ ಸಂಗೀತ ಏರ್ಪಡಿಸಲಾಗಿತ್ತು.

ಆಂಜನೇಯ ಗುಡಿ

ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ರಾಮ ತಾರಕ ಹೋಮದೊಂದಿಗೆ ವಿಶೇಷ ಪೂಜೆ ಏರ್ಪಡಿಸಿದ್ದು, ಮಹಾಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು.

ಸೋಮವಾರಪೇಟೆ

ಇಲ್ಲಿನ ಹಿಂದೂ ಜಾಗರಣಾ ವೇದಿಕೆ, ಆಂಜನೇಯ ದೇವಾಲಯ ಸಮಿತಿ, ಕುರುಹಿನ ಶೆಟ್ಟಿ ಸಮಾಜ ಮತ್ತು ರಾಮನವಮಿ ಉತ್ಸವ ಸಮಿತಿ ವತಿಯಿಂದ ರಾಮನ ಉತ್ಸವವನ್ನು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಉತ್ಸವಕ್ಕೆ ಗ್ರಾಮೀಣ ಭಾಗಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿತ್ತು. ರಾಮನವಮಿ ಪ್ರಯುಕ್ತ ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳನ್ನು ಸಿಂಗರಿಸಲಾಗಿತ್ತು. ನಗರದ ಖಾಸಗಿ ಬಸ್ ನಿಲ್ದಾಣ, ಆಂಜನೇಯ ದೇವಾಲಯ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೇಸರಿ ಧ್ವಜದೊಂದಿಗೆ ತಳಿರುತೋರಣಗಳು ಕಂಡುಬಂದರೆ, ವಾಹನಗಳಲ್ಲಿ ಕೂಡ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು.

ಆಂಜನೇಯ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಅಪರಾಹ್ನ ಬೂತನಕಾಡು ರವಿ ತಂಡದಿಂದ ಭಜನೆ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಪ್ರಮುಖರಾದ ಜಗದೀಶ್ ಕಾರಂತ್ ಮಾತನಾಡಿದರು.

ಸಭಾ ಕಾರ್ಯಕ್ರಮದ ನಂತರ ಗ್ರಾಮೀಣ ಭಾಗಗಳಿಂದ ಆಗಮಿಸಿದ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ದೇವಾಲಯದಿಂದ ಹೊರಟು ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಶ್ರೀ ರಾಮ ದೇವರ ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಇಟ್ಟು, ಊರಿನ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ, ಸುಗ್ಗಿ ಕುಣಿತ, ಪೂಜಾ ಕುಣಿತ, ವೀರಗಾಸೆ, ಚಂಡೆ, ವಾದ್ಯಗೋಷ್ಠಿ ತಂಡಗಳೊಂದಿಗೆ ನಡೆದ ಮೆರವಣಿಗೆ ಆಕರ್ಷಣೀಯವಾಗಿತ್ತು.

ಸೋಮವಾರಪೇಟೆ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಆಶ್ರಯದಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವಿಜೃಂಭಣೆಯಿಂದ ಶ್ರೀ ರಾಮನವಮಿಯನ್ನು ಆಚರಿ¸ Àಲಾಯಿತು. ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಪೆಂಡಾಲ್‍ನಲ್ಲಿ ಇಂದು ಬೆಳಿಗ್ಗೆ ಶ್ರೀ ರಾಮಚಂದ್ರನ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಯಿತು.

ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಅಪರಾಹ್ನ ನೆರೆದಿದ್ದ ನೂರಾರು ಮಂದಿಗೆ ಪಾನಕ ವಿತರಿಸಲಾಯಿತು. ಬೆಳಗಿನಿಂದ ಸಂಜೆವರೆಗೂ ವಿಶೇಷ ಪೂಜೆಗಳು ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬಜೆಗುಂಡಿ: ರಾಮನವಮಿ ಅಂಗವಾಗಿ ಸಾರ್ವಜನಿಕರಿಗೆ ಮಜ್ಜಿಗೆ, ಅಬ್ಬೂರುಕಟ್ಟೆಯಲ್ಲಿ ಪಾನಕ ವಿತರಿಸಲಾಯಿತು.

ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಇಲ್ಲಿನ ರಾಮಮಂದಿರದಲ್ಲಿ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಿಸಲಾಯಿತು. ದೇವಾಲಯದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪಾನಕ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ರಾಮ ದೇವರ ಉತ್ಸವ ಮೂರ್ತಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿಟ್ಟು, ಪಂಚ ವಾದ್ಯಗಳೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಉತ್ಸವದ ನಿಮಿತ್ತ ಸೋಮವಾರಪೇಟೆ ಪಟ್ಟಣದಲ್ಲಿ ನೂರಾರು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು. ಮಹಿಳಾ ಪೇದೆಗಳೂ ಸಹ ಕರ್ತವ್ಯದಲ್ಲಿದ್ದರು.

ಕುಶಾಲನಗರ : ಕೂಡಿಗೆಯ ಶ್ರೀ ರಾಮನವಮಿ ಆಚರಣಾ ಸಮಿತಿ ಆಶ್ರಯದಲ್ಲಿ ರಾಮನವಮಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಮಿತಿ ಪದಾಧಿಕಾರಿಗಳು ಕೂಡಿಗೆ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಿಸಿದರು.