ಮಡಿಕೇರಿ, ಏ. 5: ಸಾಮಾಜಿಕ ಅರಣ್ಯ ಯೋಜನೆಯಂತೆ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಗಿಡ ವಿತರಿಸುವ ಕಾರ್ಯ ಇಂದು... ನಿನ್ನೆಯದ್ದಲ್ಲ... ಹಲವು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ ಈ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲೆಯ ಮೂರು ತಾಲೂಕುಗಳಿಗೆ ಸಂಬಂಧಿಸಿದಂತೆ ತಾಲೂಕಿನ ಮೂರು ಕಡೆಗಳಲ್ಲಿ ಗಿಡಗಳನ್ನು ಬೆಳೆಸಿ ಮಳೆಗಾಲ ಆರಂಭದ ಸಂದರ್ಭ ರೈತರಿಗೆ, ಪಂಚಾಯಿತಿ ಮೂಲಕ, ಜನಪ್ರತಿನಿಧಿಗಳ ಶಿಫಾರಸ್ಸಿನಂತೆ ರಿಯಾಯಿತಿ ದರದಲ್ಲಿ ಸಿಲ್ವರ್ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ವಿತರಿಸುವದು ಈ ಯೋಜನೆ.

ಈ ಬಾರಿ ನರ್ಸರಿಯಲ್ಲಿ ಗಿಡ ಬೆಳೆಸುವ ಹಂತದಿಂದಲೇ ಈ ಯೋಜನೆಯಲ್ಲಿ ಅಸಮತೋಲನದ ಅಸಮಾಧಾನ ಕಂಡುಬಂದಿರುವದು ಬೆಳಕಿಗೆ ಬಂದಿದೆ. ವೀರಾಜಪೇಟೆ ತಾಲೂಕಿಗೆ ಕದನೂರು ಫಾರ್ಮ್, ಸೋಮವಾರಪೇಟೆಗೆ ಹುದುಗೂರು ಹಾಗೂ ಮಡಿಕೇರಿ ತಾಲೂಕಿಗೆ ಹೊದ್ದೂರಿನ ವಾಟೆಕಾಡು ಫಾರ್ಮ್‍ನಲ್ಲಿ ಗಿಡಗಳನ್ನು ಬೆಳೆಯಲಾಗುತ್ತಿದೆ.

ಸಾಮಾನ್ಯವಾಗಿ ಇದರ ನಿರ್ವಹಣೆ ಆರ್.ಎಫ್.ಓ. ಫಾರೆಸ್ಟರ್ ಅಥವಾ ಗಾರ್ಡ್‍ಗಳ ಮೂಲಕ ನಡೆಯುತ್ತಿದೆ. ಆದರೆ ಇಲ್ಲಿನ ಕುತೂಹಲವೆಂದರೆ ಈ ಬಾರಿ ಬಹುತೇಕ ಇದರ ಜವಾಬ್ದಾರಿಯನ್ನು ಹೊತ್ತಿರುವವರು ಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್.ಓ. ಹಾಗೂ ಎ.ಸಿ.ಎಫ್. ಎಂಬ ಮಾತು ಕೇಳಿ ಬಂದಿದೆ. ಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್.ಓ. ಆಗಿ ಎಸ್. ಪುರುಷೋತ್ತಮ್ ಅವರು ಆಗಸ್ಟ್‍ನಿಂದ ಜಿಲ್ಲೆಯಲ್ಲಿ ಅಧಿಕಾರವಹಿಸಿಕೊಂಡಿದ್ದಾರೆ.

ರಜೆಯಲ್ಲಿ ಸಿಬ್ಬಂದಿಗಳು

ಹೊಸ ಡಿಎಫ್‍ಓ ಅವರ ಆಗಮನದ ನಂತರ ಅಧಿಕಾರಿ ಹಾಗೂ ಕೆಳ ಹಂತದ ಸಿಬ್ಬಂದಿಗಳ ನಡುವೆ ಕಂದಕವೇರ್ಪಟ್ಟಿದೆ ಎನ್ನಲಾಗುತ್ತಿದೆ.

(ಮೊದಲ ಪುಟದಿಂದ) ಇದಕ್ಕೆ ಪೂರಕವಾಗಿ ಆರ್.ಎಫ್.ಓ. ಫಾರೆಸ್ಟರ್‍ಗಳು ರಜೆ ಹಾಕಿ ತೆರಳಿದ್ದಾರೆ. ಡಿಸೆಂಬರ್‍ನಿಂದ ಗಿಡ ಬೆಳೆಯುವ ಪ್ರಕ್ರಿಯೆ ನಡೆದಿದ್ದು, ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಬಳಿಕ ಮೂರು ಕೇಂದ್ರಗಳಲ್ಲೂ ಖಾಸಗಿ ಗುತ್ತಿಗೆದಾರರ ಹೆಸರಿನಲ್ಲಿ ಗಿಡ ಬೆಳೆಯಲಾಗುತ್ತಿದೆಯಂತೆ. ಹೆಸರಿಗೆ ಗುತ್ತಿಗೆದಾರರಿದ್ದರೂ ಉಸ್ತುವಾರಿ ಡಿಎಫ್‍ಓ ಹಾಗೂ ಎಸಿಎಫ್ ಅವರದ್ದು ಎಂಬ ಮಾತು ದಟ್ಟವಾಗಿದೆ.

ಕಿರಿಯ ಅಧಿಕಾರಿಯ ಚಾರ್ಜ್ ಹಿರಿಯ ಅಧಿಕಾರಿಗೆ

ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಈ ಇಲಾಖೆಯ ಆರ್‍ಎಫ್‍ಓಗಳಿಲ್ಲ. ಈ ಜವಾಬ್ದಾರಿ ಇದ್ದವರು ರಜೆಯಲ್ಲಿ ತೆರಳಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ಹಂತದ ಅಧಿಕಾರಿಯ ಚಾರ್ಜ್ ಪಡೆದಿರುವದು ಇವರಿಗಿಂತ ಹಿರಿಯ ಅಧಿಕಾರಿಯಾಗಿರುವ ಎಸಿಎಫ್ ವಿಜಯ ಕುಮಾರ್ ಎಂಬದು ಸೋಜಿಗದ ಸಂಗತಿ!

ಈ ತನಕ ಮೂರು ತಾಲೂಕಿನ ಫಾರ್ಮ್‍ಗಳಲ್ಲಿ ಗಿಡ ಬೆಳೆಯಲು ತಲಾ 8 ಲಕ್ಷದಂತೆ ಮಾರ್ಚ್ ಅಂತ್ಯಕ್ಕೆ ರೂ. 24 ಲಕ್ಷ ಹಣ ಪಡೆಯಲಾಗಿದೆ. ಇದಾದ ನಂತರ ಜೂನ್ ಅಂತ್ಯ ಅಥವಾ ಜುಲೈ ವೇಳೆಗೆ ರೈತರಿಗೆ ಗಿಡ ನೀಡಲಾಗುತ್ತಿದ್ದು, ಈ ತನಕದ ನಿರ್ವಹಣೆ ವೆಚ್ಚ ಪ್ರತ್ಯೇಕವಾಗಿರುತ್ತದೆ.

ಗುಣಮಟ್ಟವಿಲ್ಲದ ಗಿಡ ದೂರು

2016-17ನೇ ಸಾಲಿನಲ್ಲಿ ಮೂರು ತಾಲೂಕಿನಲ್ಲಿ ತಲಾ 2.25 ಲಕ್ಷ ಸಸಿ ಬೆಳೆಸಲು ಜಿ.ಪಂ. ಅನುಮೋದನೆಯಾಗಿದೆ. ಆದರೆ ಬೆಳೆಯುತ್ತಿರುವ ಗಿಡದ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ. ಕಳಪೆ ನಿರ್ವಹಣೆಯಿಂದ ಸಸಿಗಳ ಬೆಳವಣಿಗೆ ಈ ವೇಳೆಗೆ ಹೇಗಿರಬೇಕಿತ್ತೋ ಅಷ್ಟು ಬೆಳವಣಿಗೆ ಕಂಡಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತದ ಪ್ರಮುಖರಿಗೂ ದೂರು ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಅವರು ಈ ವಿಚಾರದ ಬಗ್ಗೆ ಯಾರೂ ಸ್ಪಷ್ಟವಾದ ದೂರು ಸಲ್ಲಿಸಿಲ್ಲ. ಸ್ಪಷ್ಟವಾದ ದೂರು ಸಲ್ಲಿಕೆಯಾದರೆ ಪರಿಶೀಲಿಸಲಾಗುವದು ಎಂದು ತಿಳಿಸಿದ್ದಾರೆ.

ಉದ್ಯೋಗ ಖಾತ್ರಿಯಲ್ಲಿ ವೇತನ ಬಾಕಿ

ಸಾಮಾಜಿಕ ಅರಣ್ಯ ಇಲಾಖೆ ಮೂಲಕ ಉದ್ಯೋಗ ಖಾತ್ರಿ ಯೋಜನೆ (ಎನ್‍ಆರ್‍ಇಜಿ)ಯಡಿ ಕಳೆದ ವರ್ಷ ಬೆಳಸಿ ವಿತರಿಸಿರುವ ಗಿಡಕ್ಕೆ ಸಂಬಂಧಿಸಿದಂತೆಯೂ ಹಲವರಿಗೆ ವೇತನ ಪಾವತಿ ಬಾಕಿ ಇರುವದಾಗಿ ತಿಳಿದು ಬಂದಿದ್ದು, ಈ ಬಗ್ಗೆಯೂ ಮೇಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ಈಗಿನ ಡಿಎಫ್‍ಓ ಆಗಸ್ಟ್‍ನಲ್ಲಿ ಅಧಿಕಾರ ವಹಿಸಿಕೊಂಡಿದ್ದು ಅದಕ್ಕೆ ಮುಂಚಿತ ಕೆಲಸಕ್ಕೆ ಹಣ ಪಾವತಿಗೆ ನಿರಾಕರಿಸುತ್ತಿದ್ದಾರೆಂದು ಹೇಳಲಾಗಿದೆ. ಬ್ಯಾಡಗೊಟ್ಟ, ದುಂಡಳ್ಳಿ ಹಾಗೂ ಕಕ್ಕಬೆ ವಿಭಾಗದಲ್ಲಿ ವೇತನ ಪಾವತಿ ಬಾಕಿ ಇದ್ದು, ಸುಮಾರು 4 ಲಕ್ಷಕ್ಕೂ ಅಧಿಕ ಹಣ ಪಾವತಿಯಾಗಬೇಕಿದೆ.

ಆಗದ ಮ್ಯಾಪಿಂಗ್

ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿ ಬದಲಾದರೆ ಹೊಸದಾಗಿ ಅಧಿಕಾರ ವಹಿಸಿಕೊಂಡವರು 15 ದಿನದೊಳಗೆ ಥಮ್ ಮತ್ತು ಡೋಂಗಲ್ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕಿದೆ. ಆದರೆ ಹೊಸ ಡಿಎಫ್‍ಓ ಮಾರ್ಚ್ ಕಳೆದರೂ ಈ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ.