ಮಡಿಕೇರಿ, ಏ. 6: ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ನಿನ್ನೆ ಭಾವುಕತೆಯ ಸನ್ನಿವೇಶವೊಂದಕ್ಕೆ ಒಳಗಾಗಿತ್ತು. ಇಲ್ಲಿ ನೋವಿನ ಭಾವವೂ ಇತ್ತು. ಇದರೊಂದಿಗೆ ಅಗಲಿಕೆಯ ನಡುವೆಯೂ ಪರಸ್ಪರ ಪ್ರೀತಿಯ ಭಾವ, ಹಳೆಯ ದಿನಗಳ ಒಡನಾಟ, ಕುಚೇಷ್ಟೆಯ ಮೆಲುಕು, ಕ್ಷಮೆಯಾಚನೆ, ಶುಭ ಹಾರೈಕೆ ಎಲ್ಲವೂ ಸೇರಿತ್ತು. ಈ ದಿನವನ್ನು ಸ್ಮರಣೀಯವಾಗಿಡಲು ವಿವಿಧ ಸ್ಪರ್ಧೆಗಳ ಪ್ರಯತ್ನವೂ ಸೇರಿದ್ದವರನ್ನು ನಕ್ಕು ನಲಿಸುವದರೊಂದಿಗೆ ಎಲ್ಲರನ್ನೂ ಬೆಸೆದಿತ್ತು. ಇವೆಲ್ಲದಕ್ಕೂ ವೇದಿಕೆಯಾಗಿದ್ದು, ಕಾಲೇಜಿನಲ್ಲಿ ಅಂತಿಮ ವರ್ಷ ಪೂರೈಸಿ ಈ ಕಾಲೇಜಿಗೆ ವಿದಾಯ ಹೇಳುತ್ತಿರುವ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿ ಸಹಪಾಠಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ.

ಕಾಮರ್ಸ್ ಡಿಪಾರ್ಟ್‍ಮೆಂಟ್‍ನ ವಿದ್ಯಾರ್ಥಿಗಳಿಗೆ ಈ ವಿಭಾಗದ ಕಿರಿಯರು ವಿಶಿಷ್ಟ ರೀತಿಯಲ್ಲಿ ಈ ಸಮಾರಂಭ ಏರ್ಪಡಿಸಿದ್ದರು. ವಿದ್ಯಾರ್ಥಿ ಸಮೂಹದೊಂದಿಗೆ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗಿಗಳಾಗಿದ್ದರು. ಕಾಲೇಜಿಗೆ ವಿದಾಯ ಹೇಳುತ್ತಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಳ್ಳುವದರೊಂದಿಗೆ ಮಾಡಿದ್ದ ತಪ್ಪುಗಳ ಬಗ್ಗೆ ಉಪನ್ಯಾಸಕರ ಕ್ಷಮೆ ಕೋರಿದರೆ, ಉಪನ್ಯಾಸಕರು, ಕಿರಿಯ ವಿದ್ಯಾರ್ಥಿಗಳು ಶುಭ ಕೋರಿ ಮಾತನಾಡಿದರು. ಒಂದಿಬ್ಬರು ಉಪನ್ಯಾಸಕರು ವಿದ್ಯಾರ್ಥಿಗಳು ನೃತ್ಯ, ಹಾಡಿನ ಮೂಲಕವೂ ಹುರಿದುಂಬಿಸಿದರು.

ಇದರೊಂದಿಗೆ ವಿಶೇಷವಾಗಿ ಕಾಲೇಜು ಸೇರ್ಪಡೆ ಬಳಿಕ ನಡೆದ ಆಗು - ಹೋಗುಗಳು. ಕುಚೇಷ್ಟೆ, ಕ್ರೀಡೆ, ಎನ್‍ಸಿಸಿ, ಸಾಂಸ್ಕøತಿಕ ಕಾರ್ಯಕ್ರಮ, ಉಪನ್ಯಾಸಕ ರೊಂದಿಗಿನ ಕುಚೇಷ್ಟೆ ಇತ್ಯಾದಿಗಳನ್ನು ಮೆಲುಕು ಹಾಕುವಂತೆ ಮಾಡಲು ಕೆಲವು ವಿದ್ಯಾರ್ಥಿಗಳು ತಯಾರಿಸಿದ್ದ ಸುಮಾರು 10 ನಿಮಿಷಗಳ ವೀಡಿಯೋ ಚಿತ್ರೀಕರಣದ ಕ್ಲಿಪ್ ಅನ್ನು ಪ್ರದರ್ಶಿಸಲಾಯಿತು. ಇದು ಎಲ್ಲರಲ್ಲೂ ಹಳೆಯ ಮೆಲುಕಿನೊಂದಿಗೆ ನಸು ನಕ್ಕರು. ವಿಶೇಷವಾಗಿ ಏರ್ಪಡಿಸಿದ್ದ ಕೆಲವು ಕಾಮಿಡಿ ಸ್ಪರ್ಧೆಗಳು ಗಮನ ಸೆಳೆದವು.

ಮೋಸ್ಟ್ ಕ್ಲಾಸ್ ಬಂಕರ್, ಟಾಮ್ ಬಾಯ್ (ಯುವತಿ), ಕ್ಯೂಟ್, ಪಂಚುವಲ್, ಪ್ರೆಟಿಬಾಯ್, ಸೈಲೆಂಟ್, ಸೀರಿಯಸ್, ಆಲ್‍ರೌಂಡರ್, ಮಲ್ಟಿ ಟ್ಯಾಲೆಂಟೆಡ್, ಬೆಸ್ಟ್ ಡ್ಯಾನ್ಸರ್, ಸಿಂಗರ್, ರೋಮಿಯೋ ಬಿಂದಾಸ್ ಎಂದು ಆಯ್ಕೆ ಮಾಡಿ ನೆನಪಿನ ಕಾಣಿಕೆ ನೀಡುವ ಮೂಲಕ ಬೀಳ್ಕೊಡುಗೆ ಸಮಾರಂಭವನ್ನು ಸ್ಮರಣೀಯ ವಾಗಿರಿಸಿದ ಕಿರಿಯರು ಹಿರಿಯ ರೊಂದಿಗೆ ತಾವೂ ‘ಎಂಜಾಯ್’ ಮಾಡಿದರು.

ಮಿಸ್ಟರ್ ಎಫ್‍ಎಂಸಿ, ಮಿಸ್ ಎಫ್‍ಎಂಸಿ, ಮಿಸ್ಟರ್ ಹ್ಯಾಂಡ್ ಸಮ್, ಮಿಸ್ ಎತ್‍ನಿಕ್ ಸ್ಪರ್ಧೆ ಯನ್ನೂ ಆಯೋಜಿಸಿ ಬಹುಮಾನ ನೀಡಲಾಯಿತು. ರ್ಯಾಂಪ್‍ವಾಕ್, ಸೆಲ್ಫ್ ಇಂಟ್ರಡಕ್ಷನ್, ಪ್ರಶ್ನೋತ್ತರ, ಲಿಖಿತ ಸ್ಪರ್ಧೆಗಳ ಮೂಲಕ ಈ ವಿಜೇತರನ್ನು ಆಯ್ಕೆ ಮಾಡಲಾ ಯಿತು. ಇದಾದ ಬಳಿಕ ಫೋಟೋ ಸೆಷನ್ ನಡೆದ ಕೆಲವಾರು ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದೂ ನಡೆಯಿತು. ಅಗಲಿಕೆಯ ನೋವು, ಪ್ರೀತಿಯ ಆಲಿಂಗನದೊಂದಿಗೆ ಶುಭ ಕೋರುವದರೊಂದಿಗೆ ಈ ‘ಸೆಂಡಾಫ್’ ವಿಶೇಷವಾಗಿತ್ತು.

-ಶಶಿ ಸೋಮಯ್ಯ