ಶಸ್ತ್ರಚಿಕಿತ್ಸಾ ಉಚಿತ ಶಿಬಿರ

ಅಶ್ವಿನೀ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಶಿಬಿರದ ಉದ್ಘಾಟನೆಯು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇತರರು ಪಾಲ್ಗೊಳ್ಳಲಿದ್ದಾರೆ.

ವಾರ್ಷಿಕೋತ್ಸವ ಸಮಾರಂಭ

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಬೆಳಿಗ್ಗೆ 11 ಗಂಟೆಗೆ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ನಡೆಯಲಿದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಾಧವ ಎಂ.ಕೆ, ಸ.ಪ್ರ.ದ.ಮ. ಕಾಲೇಜಿನ ಪ್ರಾಂಶುಪಾಲ ಡಾ. ಜೆನಿಫರ್ ಲೋಲಿಟ ಇತರರು ಪಾಲ್ಗೊಳ್ಳಲಿದ್ದಾರೆ.

ವಿಶ್ವ ಆರೋಗ್ಯ ದಿನಾಚರಣೆ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದ ಬೋಧಕೀಯ ಕೊಠಡಿ ಸಂಖ್ಯೆ 1 ರಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಖಿನ್ನತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ತಿಳಿಸಿದ್ದಾರೆ.

ಇಂದು ಪದಗ್ರಹಣ

ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 15ನೇ ಅಧ್ಯಕ್ಷರಾಗಿ ಜಿ.ಬಿ ಹರೀಶ್ ಅವರು ತಾ. 7 ರಂದು (ಇಂದು) ಪದಗ್ರಹಣ ಮಾಡಲಿದ್ದಾರೆ ಎಂದು ಜೆಸಿಐ ನಿರ್ಗಮಿತ ಅಧ್ಯಕ್ಷ ವೆಂಕಪ್ಪ ಕೊಟ್ಯಾನ್ ತಿಳಿಸಿದರು.

“ನ್ಯೂಸ್ ಗ್ಯಾಲರಿ ಕಚೇರಿಯಲ್ಲಿ” ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು 7ನೇ ಹೊಸಕೋಟೆಯ ಫಿಲಾ ರೆಸಾರ್ಟ್‍ನಲ್ಲಿ ನಡೆಯುವ ಸಮಾರಂಭವನ್ನು ಜೆಸಿಐ ಇಂಡಿಯಾದ ರಾಷ್ಟ್ರೀಯ ನಿರ್ದೇಶಕರಾದ ಡಾ.ನವೀನ್ ಲಾಯಿಡ್ ಮೆಸ್ಕತ್ ಅವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಹಾಸನ ಗ್ರಾಹಕರ ವ್ಯಾಜ್ಯ ವೇದಿಕೆಯ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಜೆಸಿ ವೆಂಕಪ್ಪ ಕೊಟ್ಯಾನ್ ವಹಿಸಲಿದ್ದು ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಿಚರ್ಡ್ ಮಡಾಯಿಸ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ವಲಯ ಪಿಜಡ್‍ಪಿ ದೇವಿಪ್ರಸಾದ್ ಕಾಯರ್‍ಮಾರ್, ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜೆಸಿ ಕಾರ್ಯದರ್ಶಿ ರಮ್ಯಾ ಮೋಹನ್, ಪ್ರೇಮಲತಾರೈ, ಚರಣ್ ಎಸ್.ರೈ, ಜ್ಯೋತಿ ಪ್ರಕಾಶ್, ನಿರಂಜನ್, ಅಮೃತ್ ಇದ್ದರು.

ಮಜ್ಲಿಸುನ್ನೂರ್

ವೀರಾಜಪೇಟೆಯ ಮೀನುಪೇಟೆ ಮಲಬಾರು ರಸ್ತೆಯ ಮಸ್ಜಿದುನ್ನೂರ್ ಸಮಿತಿ ಆಶ್ರಯದಲ್ಲಿ ರಾತ್ರಿ 8:30ಕ್ಕೆ ಮಜ್ಲಿಸುನ್ನೂರ್ ವಿಜ್ಞಾನ ವೇದಿಕೆ ಮತ್ತು ದುಆ ಮಜ್ಲಿಸ್ ನಡೆಯಲಿದೆ. ಮೌವ್ವಂಚೇರಿಯ ಅಬ್ದುಸ್ಸಲಾಂ ಫೈಝಿ ಇರ್ಫಾನಿ ಉಪನ್ಯಾಸ ನೀಡಲಿದ್ದಾರೆ. ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಸಂಘಟಕರು ತಿಳಿಸಿರುತ್ತಾರೆ.