*ಗೋಣಿಕೊಪ್ಪಲು, ಏ. 7: ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸುವದನ್ನು ವಿರೋಧಿಸಿ ತಾ.ಪಂ. ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪೊನ್ನಂಪೇಟೆ ಸಾಮಥ್ರ್ಯಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಒಮ್ಮತದ ನಿರ್ಧಾರಕ್ಕೆ ತಾ.ಪಂ. ಸಭೆ ಮುಂದಾಯಿತು. ಡಾ. ಕಸ್ತೂರಿ ರಂಗನ್ ವರದಿಯಿಂದ ಜಿಲ್ಲೆಯ 53 ಗ್ರಾಮ ಸೂಕ್ಷ್ಮ ಪ್ರದೇಶವಾಗಿ ಅಭಿವೃದ್ದಿ ಕಾರ್ಯಗಳಿಗೆ ತೊಡಕಾಗಲಿದೆ. ಇದರ ಸಾಧಕ-ಭಾದಕಗಳನ್ನು ಪರಿಶೀಲಿಸಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವದಾಗಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ತಿಳಿಸಿದರು.

ತಾಲೂಕು ಬಿ.ಜೆ.ಪಿ ಅಧ್ಯಕ್ಷ ಅರುಣ್ ಭೀಮಯ್ಯ ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗುವ ಪರಿಣಾಮಗಳ ಬಗ್ಗೆ ವಿವರಿಸಿ, ಪರಿಸರ ಮತ್ತು ಅರಣ್ಯ ಉಳಿವಿಕೆಗೆ ವರದಿ ಉತ್ತಮವಾಗಿದ್ದರೂ ಕೃಷಿ ಚಟುವಟಿಕೆ ಗ್ರಾಮದ ಅಭಿವೃದ್ದಿಗಳಿಗೆ ಸಮಸ್ಯೆ ತರಲಿದೆ. ಜಿಲ್ಲೆಯ ಸಂಪೂರ್ಣ ಅರಣ್ಯವನ್ನು ವರದಿಯಲ್ಲಿ ಸೇರಿಸಲಿ. ಆದರೆ ಕೆಲವು ಗ್ರಾಮಗಳನ್ನು ಕೈಬಿಡಬೇಕಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಖಾಸಗಿ ಕೃಷಿ ಜಮೀನು ಸಹ ಸೂಕ್ಷ್ಮ ಪ್ರದೇಶ ಎಂದು ದಾಖಲಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಡಕಾಗಬಲ್ಲದು. ವರದಿಯಲ್ಲಿ ಇರುವ ನಿಯಮಗಳನುಸಾರ ಜನರ ದಿನದ ಚಟುವಟಿಕೆಯಲ್ಲೂ ಏರುಪೇರು ಕಾಣುತ್ತದೆ ಎಂದು ವರದಿಯನ್ನು ಆಕ್ಷೇಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಲ್ಲಿರ ಧರ್ಮಜ ಉತ್ತಪ್ಪ ಮಾತನಾಡಿ, ಜನವಸತಿ ಸ್ಥಳಗಳಲ್ಲಿ ವರದಿ ಅನುಷ್ಠಾನಗೊಂಡರೆ ಸಮಸ್ಯೆಯಾಗುತ್ತದೆ. ಅಭಿವೃದ್ದಿ ಅಸಾಧ್ಯವಾಗುತ್ತದೆ. ಗಿಡಮರ ಬೆಳೆಸಿ ಹಸಿರು ಉಳಿಸುವದು ಪ್ರತಿಯೊಬ್ಬನ ಕರ್ತವ್ಯ. ಆದರೆ ಗ್ರಾಮೀಣ ಪ್ರದೇಶವನ್ನು ಸೂಕ್ಷ್ಮ ಪ್ರದೇಶವಾಗಿಸಿ ಪರಿಸರ ಉಳಿಸುವ ನೆಪದಲ್ಲಿ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮುಂದಾದರೆ ಜನ ಸಂಕಷ್ಟ ಪಡುತ್ತಾರೆ. ಗ್ರಾಮ ಮಟ್ಟದಲ್ಲಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆÉ ಸಲ್ಲಿಸಬೇಕಾಗಿದೆ. ಕೇಂದ್ರ ಸರಕಾರ ಮೂರನೇ ಬಾರಿಗೆ ಈ ಅವಕಾಶ ಕಲ್ಪಿಸಿದ್ದು, ಈ ತಿಂಗಳ 27ರ ಒಳಗೆ ವಿರೋಧಿಸಿ ನಿರ್ಣಯದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.

ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಸ್ತೂರಿ ರಂಗನ್ ವರದಿ ಜಾರಿಯಾಗುವದರಿಂದ ಪರಿಸರ ರಕ್ಷಣೆ ಸಾಧ್ಯ. ರೈಲ್ವೆ, ಹೆದ್ದಾರಿ ಹೈಟೆಕ್ಷನ್‍ನಂತಹ ಮಾರಕ ಯೋಜನೆಗಳಿಂದ ಜಿಲ್ಲೆ ಮುಕ್ತವಾಗುತ್ತದೆ. ಜನಪ್ರತಿನಿಧಿಗಳು ಜನರಿಗೆ ತಪ್ಪು ಮಾಹಿತಿಯನ್ನು ನೀಡಿ ಹಾದಿ ತಪ್ಪಿಸುವುದು ಬೇಡ. ತಾಂತ್ರಿಕವಾಗಿ ವರದಿ ಸಾಧಕ ಭಾದಕಗಳನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುವದು ಉತ್ತಮ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ. ಗ್ರಾಮೀಣ ಭಾಗದ ಜನರಿಗೂ ಇದು ಸಮಸ್ಯೆಯಾಗಿ ಕಾಡುತ್ತದೆ. ಅಭಿವೃದ್ದಿ ಅಸಾಧ್ಯ. ಈ ಎಲ್ಲಾ ವಿಚಾರಗಳನ್ನು ಇಟ್ಟು ವರದಿ ಜಾರಿಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ. ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಾ.ಪಂ. ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಳ್ಳಬೇಕು ಎಂದರು. ಎರಡು ದಿನಗಳು ತಾಲೂಕಿನ ಪ್ರತಿ ಗ್ರಾ.ಪಂ.ಗಳಲ್ಲಿ ವಿಶೇಷ ಸಭೆ ಕರೆದು ವರದಿ ಅನುಷ್ಠಾನ ವಿರೋಧಿಸಿ ನಿರ್ಣಯ ಕೈಗೊಳ್ಳುವಂತೆ ಕ್ರಮಕ್ಕೆ ಮುಂದಾಗಲು ಸೂಚಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ತಿಳಿಸಿದರು. ಜಯಾ ಪೂವಯ್ಯ, ಪ್ರಕಾಶ್, ಆಶಾ ಪೂಣಚ್ಚ, ಆಶಾ ಜೇಮ್ಸ್ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.