ಸೋಮವಾರಪೇಟೆ, ಏ. 6: ನಗರಳ್ಳಿ ಗ್ರಾಮದ ಕೂತಿನಾಡು ಸಬ್ಬಮ್ಮ ದೇವರ ಸಮಿತಿ ವತಿಯಿಂದ ಅನಾದಿಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವವನ್ನು ಪ್ರಸಕ್ತ ಸಾಲಿನಲ್ಲಿ ನಗರಳ್ಳಿ ಗ್ರಾಮದ ಸುಗ್ಗಿದೇವರ ಬನದಲ್ಲಿ ತಾ. 17ರಂದು ಆಚರಿಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ ತಿಳಿಸಿದ್ದಾರೆ.

ಆಚರಣೆಗಳು ಪ್ರಾರಂಭ ಗೊಳ್ಳಲಿದ್ದು, ತಾ. 8ರಂದು ಕಂಬದ ಮೇಲೆ ಬಾವುಟ ಹಾರಿಸಿ, ದೀಪ ಬೆಳಗುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವದು ಎಂದರು.

ತಾ. 9ರಂದು ಬೇಟೆ ಮೀಸಲು ಪೂಜಾ ಕಾರ್ಯ, ತಾ.12ರಂದು ಧರ್ಮ ಮಟೆ ಮತ್ತು ರಂಗ ಬನ ಶುದ್ಧಿ, 13ರಂದು ನೀತಿ ಬೆಟ್ಟಕ್ಕೆ ಹೋಗಿ ದೇವರನ್ನು ಕರೆಯುವದು, 14ರಂದು ಎಲ್ಲಾ ಗ್ರಾಮಗಳಲ್ಲಿ ಬಿಲ್ಲು ಸುಗ್ಗಿ, 16ರಂದು ಭಾನುವಾರ ಮೀಸಲು ದಿನದಂದು ದೇವಿಯ ಸುಗ್ಗಿ ಕಂಬವನ್ನು ಶುದ್ದೀಕರಿಸಿ ಅಲಂಕಾರ ಮಾಡುವದು, ತಾ. 17ರ ಸೋಮವಾರದಂದು ಬೆಳಿಗ್ಗೆ 7 ಗಂಟೆಯಿಂದ 12ಗಂಟೆಯವರೆಗೆ ಹಗಲು ಸುಗ್ಗಿ, ಅನ್ನದಾನ, ತಾ. 18ರಂದು ಉಯ್ಯಾಲೆ ಮಣೆ ಕೆಳಗಿಳಿಸುವ ಮೂಲಕ ಸುಗ್ಗಿ ಹಬ್ಬವನ್ನು ಮುಕ್ತಾಯ ಗೊಳಿಸಲಾಗುವದು ಎಂದು ತಿಳಿಸಿದರು.

ಅನಾದಿಕಾಲದಿಂದಲೂ ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೀಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರದ ಓಡಳ್ಳಿ ಗ್ರಾಮಸ್ಥರ ಮನೆದೇವರಾಗಿರುವ ಸಬ್ಬಮ್ಮ ದೇವರ ಸುಗ್ಗಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಗ್ರಾಮದಲ್ಲಿ ದೇವರಿಗೆ ಸಂಬಂಧಿಸಿದಂತೆ 60 ಏಕರೆ ಜಾಗವಿದ್ದು, ಈ ಜಾಗದೊಳಗೆ ದೇವರ ಕಾರ್ಯ ಮಾಡುವ 12 ದೇವರ ಬನಗಳನ್ನು ರಚಿಸಲಾಗಿದೆ. ಈ ಪೈಕಿ ಕಂಬತಳೆ ರಂಗ, ಸುಗ್ಗಿ ರಂಗ, ಬಿಲ್ಲೆ ರಂಗ ಎಂಬಲ್ಲಿ ಹಗಲು ಸುಗ್ಗಿ ನಡೆಯಲಿದ್ದು, ಸೋಮವಾರಪೇಟೆ ಮಾತ್ರವಲ್ಲದೇ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಜೋಯಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎನ್.ಕೆ. ಪ್ರಕಾಶ್, ಖಜಾಂಚಿ ಎಲ್.ಪಿ. ಈರಪ್ಪ, ಕಾರ್ಯದರ್ಶಿ ಎನ್.ಬಿ. ರಾಘವೇಂದ್ರ, ಸಹ ಕಾರ್ಯದರ್ಶಿ ಹೆಚ್.ಆರ್. ಗೋಪಾಲ ಅವರುಗಳು ಉಪಸ್ಥಿತರಿದ್ದರು.