ಭಾಗಮಂಡಲ, ಏ. 6: ಕೆದಂಬಾಡಿ ಕ್ರಿಕೆಟ್ ಕ್ಲಬ್ ಮತ್ತು ಕೆದಂಬಾಡಿ ಕುಟುಂಬಸ್ಥರ ಜಂಟಿ ಆಶ್ರಯದಲ್ಲಿ 24ನೇ ವರ್ಷದ ಗೌಡಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟಕ್ಕೆ ಇಂದು ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮಕ್ಕೆ ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಣತ್ತಲೆ ಜಯಪ್ರಕಾಶ್ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಪ್ರತಿಭೆಗಳನ್ನು ಹೊರ ತರಲು ಕ್ರೀಡಾಕೂಟಗಳು ಸಹಕಾರಿ ಆಗಲಿದೆ. ಜನಾಂಗದ ಕುಟುಂಬಸ್ಥರ ಜೊತೆ ಆತ್ಮೀಯವಾಗಿ ಬೆರೆಯಲು ಸಹಕಾರಿ ಆಗಲಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಆಟಗಾರರು ನಿಷ್ಠೆಯಿಂದ ಆಡಬೇಕು ಎಂದು ಹೇಳಿ ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು. ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ 23 ವರ್ಷಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಮುಂದಿನ 25ನೇ ವರ್ಷದ ಕ್ರೀಡಾಕೂಟವನ್ನು ಅದ್ಧೂರಿ ಯಾಗಿ ಆಚರಿಸಲಾಗುವದು ಎಂದರು.

(ಮೊದಲ ಪುಟದಿಂದ) ಸಭೆಯಲ್ಲಿ ಕೆದಂಬಾಡಿ ವಾಸು ಬೆಳ್ಯಪ್ಪ, ಸುರೇಂದ್ರ, ರಘುನಾಥ್, ಕುಮಾರ್, ರಾಧಾಕೃಷ್ಣ ಇನ್ನಿತರರು ಉಪಸ್ಥಿತರಿದ್ದರು. ಕೆದಂಬಾಡಿ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ದಿಲ್ಲಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಪಂದ್ಯಾಟ ಆರಂಭಗೊಂಡು ಅಮೆ ಮನೆ ಮತ್ತು ಬೊಳ್ಳುಮಾನಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಬೊಳ್ಳುಮಾನಿ ತಂಡವು ಆರು ಓವರ್‍ನಲ್ಲಿ 59 ರನ್ ಗಳಿಸಿತು. ಉತ್ತರವಾಗಿ ಆಡಿದ ಅಮೆಮನೆ ತಂಡ 43 ರನ್ ಗಳಿಸಿ 13 ರನ್‍ಗಳ ಸೋಲನ್ನು ಅನುಭವಿಸಿತು. ಬೊಳ್ಳುಮಾನಿ ಮತ್ತು ದೇಶಕೋಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದೇಶಕೋಡಿ ತಂಡ ಆರು ಓವರ್‍ನಲ್ಲಿ 43 ರನ್ ಗಳಿಸಿತು. ಉತ್ತರವಾಗಿ ಆಡಿದ ಬೊಳ್ಳುಮಾನಿ ತಂಡ 54 ರನ್ ಗಳಿಸಿ 4 ವಿಕೆಟ್‍ಗಳ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಕುಡೇಕಲ್ ತಂಡವು 67 ರನ್ ಗಳಿಸಿದರೆ ಬೊಳ್ಳುಮಾನಿ ತಂಡವು 48 ರನ್ ಗಳಿಸಿ 20 ರನ್‍ಗಳ ಸೋಲನ್ನನುಭವಿಸಿತು.

- ಸುನಿಲ್ ಕುಯ್ಯಮುಡಿ