ಸಿದ್ದಾಪುರ, ಏ. 7: ಕಳೆದ ಸುಮಾರು ಮೂರು ತಿಂಗಳಿನಿಂದ ದಿಡ್ಡಳ್ಳಿಯಲ್ಲಿ ಆದಿವಾಸಿ ಮಂದಿಗೆ ನಿವೇಶನ ಹಂಚಿಕೆ ವಿಚಾರ ಇದೀಗ ಸಂಪೂರ್ಣ ತಿರುವು ಪಡೆದಿದೆ. ಜಿಲ್ಲಾಮಟ್ಟದಲ್ಲಿ ದಿಡ್ಡಳ್ಳಿಯ ಗಿರಿಜನ ಆಶ್ರಮ ಶಾಲೆ ಬಳಿ ನಿರಂತರವಾಗಿ ನಡೆಯುತ್ತಿದ್ದ ಹೋರಾಟ ಅಂತ್ಯ ಕಾಣುವ ಸಂದರ್ಭ ಒದಗಿ ಬಂದಿದೆ.ಸುಮಾರು 577 ಮಂದಿ ಗಿರಿಜನ ಮಂದಿಯನ್ನು ಒಕ್ಕಲೆಬ್ಬಿಸಿದ ಬಳಿಕ ಬದಲಿ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹಾಗೂ ಸರ್ಕಾರ ಸತತ ಪ್ರಯತ್ನ ನಡೆಸಿತ್ತು. ಜಿಲ್ಲೆಯ ಇತರೆಡೆಗಳಲ್ಲಿ ಲಭ್ಯವಿರುವ ಖಾಲಿ ನಿವೇಶನವನ್ನು ಲಾಟರಿ ಮೂಲಕ ಹಾಗೂ ಆಧಾರ್ ಕಾರ್ಡ್ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಮಂಜೂರು ಮಾಡಿದ್ದರು. ಆದರೆ ಈ ಯಾವ ತೀರ್ಮಾನಗಳನ್ನು ಕೂಡ ದಿಡ್ಡಳ್ಳಿಯ ಆದಿವಾಸಿಗಳು ಹಾಗೂ ಈ ಮಂದಿಗೆ ಬೆಂಬಲ ನೀಡುತ್ತಾ ಬಂದಿರುವ ರಾಜ್ಯ ಮತ್ತು ಜಿಲ್ಲಾಮಟ್ಟದ ಕೆಲವು ಸಂಘಟನೆಗಳ ಪ್ರಮುಖರು ಒಪ್ಪಿಗೆ ನೀಡದೆ ತಿರಸ್ಕರಿಸುತ್ತ ಬಂದರು.
ನಿವೇಶನ ಮಂಜೂರು ಮಾಡುವದಾದರೆ, ದಿಡ್ಡಳ್ಳಿಯಲ್ಲೇ ನೀಡಿ ಬೇರೆ ಕಡೆಗೆ ನಾವು ಹೋಗುವದಿಲ್ಲ ಎಂದು ಆದಿವಾಸಿಗಳು ಪಟ್ಟು ಹಿಡಿದರು. ಈ ಬೇಡಿಕೆ ಈಡೇರಿಕೆ ಕಾನೂನಾತ್ಮಕವಾಗಿ ಅಸಾಧ್ಯವೆಂದು ಜಿಲ್ಲಾಡಳಿತ ಸ್ಪಷ್ಟ ನಿಲುವು ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ದಿಡ್ಡಳ್ಳಿಯಿಂದ ರಾಜ್ಯದ ರಾಜಧಾನಿ ಬೆಂಗಳೂರುವರೆಗೆ ಸತತ 7 ದಿನಗಳ ಕಾಲ ಕಾಲ್ನಡಿಗೆ ಜಾಥಾ ತೆರಳಲು ಆದಿವಾಸಿಗಳು
(ಮೊದಲ ಪುಟದಿಂದ) ನಿರ್ಧರಿಸಿದ್ದು, ಇಂದು ಜಾಥಾ ಬೆಂಗಳೂರಿನತ್ತ ಪಯಣ ಬೆಳೆಸಿತು. ಆದರೆ, ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಜಾಥಾವನ್ನು ಕೈ ಬಿಡಲಾಗಿದೆ. ದಿಡ್ಡಳ್ಳಿಯಿಂದ ಕಾಲ್ನಡಿಗೆಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭಪಿರಿಯಾಪಟ್ಟಣದ ಸಮೀಪದ ಮುತ್ತೂರು ತಲುಪುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿತಿಯ ಪ್ರಮುಖರಿಗೆ ಕರೆ ಮಾಡಿ ಮಾತನಾಡಿದರು. ನಿರಾಶ್ರಿತ ಆದಿವಾಸಿಗಳು ಕಾಲ್ನಡಿಗೆಯ ಮೂಲಕ ಬಹುದೂರ ಸಂಚರಿಸುವದು ಕಷ್ಟಕರವಾಗಿದ್ದು, ತಾ.11 ರಂದು ಸಭೆ ಕರೆಯಲಾಗಿದೆ ಎಂದಿದ್ದಾರೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಪ್ರಮುಖ ಸಿರಿಮನೆ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರ್ರಿಗಳ ಸಭೆ ಕರೆಯಲಾಗಿದ್ದು, ಸಭೆಯ ಅಧಿಕೃತ ಪತ್ರ ಹೋರಾಟ ಸಮಿತಿಗೆ ತಲುಪಿದ ಹಿನ್ನೆಲೆಯಲ್ಲಿ ಕಾಲ್ನಡಿಗೆ ಜಾಥವನ್ನು ಕೈಬಿಡಲಾಗಿದೆ ಎಂದರು. ತಾ.11 ರಂದು ನಡೆಯುವ ಸಭೆಯಲ್ಲಿ ಶಾಶ್ವತ ನಿವೇಶನ ಸಿಗುವ ಬಗ್ಗೆ ನಿರೀಕ್ಷೆಯಿದ್ದು, ಇಲ್ಲವಾದಲ್ಲಿ ಚಲೋ ಬೆಂಗಳೂರು ಮುಂದುವರೆಸುವದಾಗಿ ಅವರು ತಿಳಿಸಿದರು. ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ನಿರ್ವಾಣಪ್ಪ, ಕಂದಗಲ್ ಶ್ರೀನಿವಾಸ್, ಅಮೀನ್ ಮೊಹಿಸಿನ್, ಶೌಕತ್ ಆಲಿ, ವಸಂತ್, ಹೆಚ್.ಎಂ ಕಾವೇರಿ ಇದ್ದರು.