ಮಡಿಕೇರಿ, ಏ. 7 : ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ರೈತರುಗಳು ಸಹಕಾರ ಸಂಘಗಳ ಮೂಲಕ ಸಾಲ ಪಡೆದಲ್ಲಿ ಸದರಿ ಸಾಲದ ಮೊತ್ತಕ್ಕೆ ಬೆಳೆ ವಿಮೆ ಪ್ರೀಮಿಯಂ ಕಡ್ಡಾಯ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳಿಂದ ತೀವ್ರ ವಿರೋಧ ವ್ಯಕ್ತಗೊಂಡಿದೆ. ಬೆಳೆ ವಿಮೆ ಕಡ್ಡಾಯ ಆದೇಶದ ಕುರಿತಾಗಿ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಇಂದು ಮಡಿಕೇರಿಯಲ್ಲಿ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲೆಯ ಪ್ಯಾಕ್ಸ್ ಅಧ್ಯಕ್ಷರುಗಳೂ ಜಿಲ್ಲಾ ಕೇಂದ್ರ ಬ್ಯಾಂಕ್, ಸಹಕಾರ ಸಂಘಗಳ ಉಪನಿಬಂಧಕರು, ಕೃಷಿ ಇಲಾಖೆಯ ಅಧಿಕಾರಿಯನ್ನೊಳಗೊಂಡ ವಿಶೇಷ ಸಭೆಯಲ್ಲಿ ಬೆಳೆ ವಿಮೆ ಪ್ರೀಮಿಯಂ ಕುರಿತಾಗಿ ತೀವ್ರ ಚರ್ಚೆ ನಡೆಯಿತು.ಬೆಳೆ ವಿಮೆ ಪ್ರೀಮಿಯಂ ಕಡ್ಡಾಯ ಆದೇಶದ ವಿರುದ್ಧ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರುಗಳಿಂದ ಆಕ್ಷೇಪ ಕೇಳಿ ಬಂದಿತು.

(ಮೊದಲ ಪುಟದಿಂದ) ಈ ಪ್ರಸ್ತಾವನೆಯಿಂದ ಗೊಂದಲವೂ ಸೃಷ್ಟಿಯಾಗಿದ್ದು, ಸಹಕಾರ ಸಂಘಗಳು, ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಲಿ ಸಮಸ್ಯೆ ಎದುರಿಸುವಂತಾಗಿದೆ. ಎಲ್ಲಾ ರೈತರು ಇದನ್ನು ಒಪ್ಪುತ್ತಿಲ್ಲ. ಇದರೊಂದಿಗೆ ಇಲ್ಲಿ ವಾತಾವರಣವೂ ಏಕ ರೀತಿಯಾಗಿಲ್ಲ. ಸರ್ವೆ ನಂ. ಆಧಾರದಲ್ಲಿ ಬೆಳೆ ವಿಮೆ ಪ್ರೀಮಿಯಂ ಸಂಗ್ರಹಿಸಿದರೂ ಪರಿಹಾರ ದೊರೆಯುವದು ಮಾತ್ರ ಗ್ರಾ.ಪಂ.ನಲ್ಲಿ ಅಳವಡಿಸಿರುವ ಮಳೆ ಮಾಪನ ಯಂತ್ರದ ಆಧಾರದಲ್ಲಿ. ಪ್ರಸ್ತುತ ಅರ್ಧರ್ಧ ಕಿ.ಮೀ.ಗೂ ಮಳೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇಂತಹ ಹಲವು ನ್ಯೂನ್ಯತೆಗಳಿದ್ದು, ಇದು ಅವೈಜ್ಞಾನಿಕವಾಗಿದೆ ಎಂಬ ಕುರಿತು ಹಲವಾರು ಅಭಿಪ್ರಾಯ ವ್ಯಕ್ತಪಡಿಸಿದರು. ರೈತರಿಗೆ ಕ್ರಮಬದ್ಧವಾಗಿ ನಿಜವಾದ ಪ್ರಯೋಜನ ಸಮರ್ಪಕವಾಗಿ ಸಿಗುವಂತಾಗುವ ತನಕ ಈ ವಿಚಾರ ಬೇಡ ಎಂದು ಹಲವರು ಸಲಹೆ ನೀಡಿ ಆ ತನಕ ಬೆಳೆ ವಿಮೆ ಪ್ರೀಮಿಯಂ ಕಡ್ಡಾಯ ಮಾಡಬಾರದೆಂದರು. ಇದರ ವಿರುದ್ಧ ಕಾನೂನು ಹೋರಾಟದ ಕುರಿತೂ ಚರ್ಚೆ ನಡೆಯಿತು.

ಶಾಸಕದ್ವಯರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಅವರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕರು ವಿಮೆ ಪಾವತಿಯನ್ನು ಕಡ್ಡಾಯ ಮಾಡಿರುವದನ್ನು ಆಕ್ಷೇಪಿಸಿದರು. ಕಡ್ಡಾಯವಾಗಿ ಪ್ರೀಮಿಯಂ ಪಡೆಯದಿದ್ದರೆ ಸಂಘಗಳ ಮಾನ್ಯತೆ ರದ್ದು ಪಡಿಸುವದಾಗಿ ಸುತ್ತೋಲೆ ಹೊರಡಿಸಿರುವದನ್ನು ಖಂಡಿಸಲಾಯಿತು.

ರೈತರ ವಿವೇಚನೆ ನಿರ್ಧಾರ :ಮಹತ್ವದ ಚರ್ಚೆಯ ಬಳಿಕ ಬೆಳೆ ವಿಮೆ ಪಾವತಿಯನ್ನು ಬಲಾತ್ಕಾರವಾಗಿ ಪಡೆಯದೆ ರೈತರ ವಿವೇಚನೆಗೆ ಬಿಡುವಂತೆ ತೀರ್ಮಾನಿಸಲಾಯಿತು. ರೈತರು ಅವರಾಗಿ ಪಾವತಿಸಿದರೆ ಮಾತ್ರ ಪಡೆಯುವಂತೆ ಇಲ್ಲದಿದ್ದಲ್ಲಿ ಅವರಿಂದ ಮುಚ್ಚಳಿಗೆ ಪಡೆದುಕೊಂಡು ಸಾಲ ನೀಡುವ ಬಗ್ಗೆ ಒಮ್ಮತದ ನಿರ್ಣಯಕ್ಕೆ ಬರಲಾಯಿತು. ಇರುವ ನೂನ್ಯತೆಗಳ ಬಗ್ಗೆ ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಇದನ್ನು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿ ನೇರವಾಗಿ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಕೃಷಿ ಸಚಿವರ ಗಮನಕ್ಕೆ ತರುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ನೀಡಿದ ಸಲಹೆಯಂತೆ ಕ್ರಮ ವಹಿಸಲು ಈ ಸಂದರ್ಭ ಒಪ್ಪಿಗೆ ನೀಡಲಾಯಿತು. ಪಂಚಾಯಿತಿವಾರು ಇರುವ ಪರಿಹಾರ ನಿಯಮವನ್ನು ಗ್ರಾಮವಾರು ಅಥವಾ ವೈಯಕ್ತಿಕವಾಗಿ ಪರಿಗಣಿಸಲು ಹಾಗೂ ಅಗತ್ಯ ಸ್ಪಷ್ಟನೆಯನ್ನು ಸಂಬಂಧಿಸಿದವರಿಂದ ಪಡೆಯುವ ನಿಟ್ಟಿನಲ್ಲೂ ಹೆಜ್ಜೆಯಿಡಲು ತೀರ್ಮಾನಿಸಲಾಯಿತು. ಜಿಲ್ಲಾ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅವರು ಡಿ.ಸಿ.ಸಿ. ಬ್ಯಾಂಕ್‍ನಿಂದಲೂ ಅಗತ್ಯ ಸ್ಪಂದನದ ಬಗ್ಗೆ ಭರವಸೆಯಿತ್ತರು. ಯೂನಿಯನ್ ಇಂದು ಕರೆದ ಸಭೆಯಲ್ಲಿ ಶೇ. 90ಕ್ಕಿಂತಲೂ ಅಧಿಕ ಪ್ಯಾಕ್ಸ್‍ಗಳ ಅಧ್ಯಕ್ಷರು ಪಾಲ್ಗೊಂಡಿದ್ದಾರೆ.

ಇಂದಿನಿಂದ ನಿರ್ಣಯದಂತೆ ಯೂನಿಯನ್ ವ್ಯವಹರಿಸಲಿದೆ ಎಂದು ಅಧ್ಯಕ್ಷ ಮನು ಮುತ್ತಪ್ಪ ಹೇಳಿದರು.

ಕಾನೂನು ಹೋರಾಟ : ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಂಗಳೂರು ಜಿಲ್ಲೆಯ 19 ರೈತರು ವೈಯಕ್ತಿಕವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಇವರಿಗೆ ತಡೆಯಾಜ್ಞೆ ದೊರೆತಿದೆ. ಇದು ರಾಜ್ಯಕ್ಕೂ ಅನ್ವಯವಾಗಲಿದೆ. ಇದೇ ಆಧಾರದಲ್ಲಿ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಮೂಲಕವೂ ಕಾನೂನು ಹೋರಾಟ ನಡೆಸುವ ಕುರಿತೂ ಸಭೆಯಲ್ಲಿ ಚರ್ಚಿಸಿ ಮುಂದಡಿಯಿಡಲು ಒಪ್ಪಿಗೆ ನೀಡಲಾಯಿತು. ಈ ಬಗ್ಗೆ ಎಲ್ಲಾ ಅಭಿಪ್ರಾಯ ಕ್ರೋಢೀಕರಿಸಿ ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿ ಶಾಸಕರು ತಜ್ಞರೊಂದಿಗೆ ಸಮಾಲೋಚಿಸಿ ಮುಂದುವರಿಯಲು ನಿರ್ಧರಿಸಲಾಯಿತು. ಎಲ್ಲಾ ಸಂಘಗಳ ಪರವಾಗಿ ತಡೆಯಾಜ್ಞೆ ತರಲು ಡಿ.ಸಿ.ಸಿ. ಬ್ಯಾಂಕ್ ನೇತೃತ್ವ ವಹಿಸುವ ಬಗ್ಗೆ ಅಧ್ಯಕ್ಷ ಬಿ.ಡಿ. ಮಂಜುನಾಥ್ ಭರವಸೆಯಿತ್ತರು.

ಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಾಂಡ್ ಗಣಪತಿ, ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ, ನಬಾರ್ಡ್‍ನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ, ಸಹಕಾರ ಸಂಘದ ಉಪನಿಬಂಧಕ ವಿಜಯಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಪ್ಪ ಪಾಲ್ಗೊಂಡಿದ್ದರು.

ವಿವಿಧ ಸಹಕಾರ ಸಂಘಗಳ ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಬಿ.ಎಂ. ರಾಜು. ಎಸ್.ಬಿ. ಭರತ್‍ಕುಮಾರ್, ಹೊಟ್ಟೇಂಗಡ ರಮೇಶ್, ನಾಪಂಡ ರ್ಯಾಲಿ ಮಾದಯ್ಯ, ಬಾಂಡ್‍ಗಣಪತಿ ಮತ್ತಿತರರು ಚರ್ಚೆಯಲ್ಲಿ ಭಾಗಿಗಳಾಗಿದ್ದರು.