ಮಡಿಕೇರಿ, ಏ. 6: 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 150 ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ ಎಂದು ಕೆಲವು ಮಾಧ್ಯಮಗಳು ಪ್ರಕಟಿಸಿರುವದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ರಾಜ್ಯ ಬಿ.ಜೆ.ಪಿ. ಪ್ರಕಟಣೆ ಸ್ಪಷ್ಟಪಡಿಸಿದೆ.

ಈವರೆಗೂ ಯಾವದೇ ಜಿಲ್ಲೆಯಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ. ಆದರೂ ಪಟ್ಟಿ ಅಂತಿಮಗೊಂಡಿದೆ ಎನ್ನುವ ಅರ್ಥದಲ್ಲಿ ವರದಿ ಪ್ರಕಟವಾಗಿರುವದು ಅಥವಾ ಪ್ರಸಾರವಾಗಿರುವದು ಸಂಪೂರ್ಣ ಊಹಾಪೋಹದಿಂದ ಕೂಡಿದೆ. ವಿನಾಕಾರಣ ಜಿಲ್ಲೆಗಳಲ್ಲಿ ಗೊಂದಲ ಮೂಡಿಸುವ ಯತ್ನ ಇದಾಗಿದೆ.

ರಾಜ್ಯ ಅಧ್ಯಕ್ಷರೂ ಸೇರಿದಂತೆ ಪಕ್ಷದ ಬಹುತೇಕ ನಾಯಕರು ಉಪ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭ ಈ ರೀತಿಯ ಉದ್ದೇಶ ಪೂರ್ವಕವಾಗಿ ಊಹಾಪೋಹದ ಸುದ್ದಿಗಳನ್ನು ತೇಲಿಬಿಡುತ್ತಿರುವ ಉದ್ದೇಶವೇನು ಎನ್ನುವದು ನಿಗೂಢವಾಗಿದೆ. ಬಿ.ಜೆ.ಪಿ.ಯ ಯಾವದೇ ಜಿಲ್ಲಾ ಘಟಕಗಳೂ ಈ ರೀತಿಯ ವರದಿಯಿಂದ ವಿಚಲಿತರಾಗಬಾರದು.

ಬಿ.ಜೆ.ಪಿ.ಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಹಲವು ಸುತ್ತಿನ ಸಮಾಲೋಚನೆ ನಡೆದು ನಂತರವಷ್ಟೇ ತೀರ್ಮಾನವಾಗುತ್ತದೆ. ಈಗಾಗಲೇ ಅಂತಹ ಯಾವದೇ ಅಂತಿಮ ತೀರ್ಮಾನ ಆಗಿಲ್ಲ ಎಂದು ರಾಜ್ಯ ಬಿ.ಜೆ.ಪಿ. ಮಾಧ್ಯಮ ಸಂಚಾಲಕ ಎಸ್. ಶಾಂತಾರಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.