ಮಡಿಕೇರಿ, ಏ.7 : ಕಳೆದ 21 ವರ್ಷಗಳ ಹಿಂದೆ ಪ್ರಾರಂಭಗೊಂಡ ಕೊಡವ ಕೌಟುಂಬಿಕ ಹಾಕಿ ಉತ್ಸವ ಹೊಸ ಹೊಸ ದಾಖಲೆಗಳೊಂದಿಗೆ ಮತ್ತೊಂದು ಮೈಲಿಗಲ್ಲು ತಲಪಿದೆ. ನಾಪೋಕ್ಲುವಿನಲ್ಲಿ ಈ ಬಾರಿ ನಡೆಯಲಿರುವ 21ನೇ ವರ್ಷದ ಹಾಕಿ ಉತ್ಸವ ಬಿದ್ದಾಟಂಡ ಕಪ್ -2017ರಲ್ಲಿ ದಾಖಲೆಯ 306 ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಪ್ರಥಮ ವರ್ಷದ ಪಾಂಡಂಡ ಕಪ್ ಹಾಕಿ ಉತ್ಸವ 60 ತಂಡಗಳ ಮೂಲಕ ಆರಂಭಗೊಂಡಿದ್ದು, ನಂತರದ ವರ್ಷಗಳಲ್ಲಿ ತಂಡಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿತ್ತು. ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ನಲ್ಲೂ ಸ್ಥಾನ ಪಡೆದಿರುವ ಈ ಹಾಕಿ ಉತ್ಸವ ವಿಶ್ವದ ಗಮನ ಸೆಳೆದಿದೆ. ಈ ಹಿಂದೆ ನಾಪೋಕ್ಲುವಿನಲ್ಲೇ ನಡೆದ ಕಲಿಯಂಡ ಕಪ್ನಲ್ಲಿ 281 ತಂಡಗಳು ಪಾಲ್ಗೊಂಡಿದ್ದು, ಇದು ಹೆಚ್ಚು ತಂಡ ಪಾಲ್ಗೊಂಡ ಪಂದ್ಯಾವಳಿಯಾಗಿತ್ತು. ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ಶಾಂತೆಯಂಡ ಕಪ್ನಲ್ಲಿ 299 ತಂಡ ಭಾಗವಹಿಸಿದ್ದು, ಹೊಸ ದಾಖಲೆ ಯಾಗಿತ್ತು. ಇದೀಗ ಬಿದ್ದಾಟಂಡ ಕಪ್ ಹಾಕಿಯಲ್ಲಿ ತಂಡಗಳ ಸಂಖ್ಯೆ 300ರ ಗಡಿ ದಾಟಿದೆ. ಈ ಪಂದ್ಯಾವಳಿಯಲ್ಲಿ 306 ತಂಡಗಳ ಹೆಸರು ನೋಂದಣಿಯಾಗಿರುವದು ಹಾಕಿ ಉತ್ಸವದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದಂತಾಗಿದೆ.