ಕುಶಾಲನಗರ, ಏ. 6: ಕುಶಾಲನಗರ ಸಮೀಪದ ಕೊಡಗರಹಳ್ಳಿ ಬಳಿ ಶಾಲೆಯ ಆವರಣಕ್ಕೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟ ಘಟನೆ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ. ಅಲ್ಲಿನ ಶಾಂತಿನಿಕೇತನ ಶಾಲೆಯ ಬಳಿ 7 ಕಾಡಾನೆಗಳು ಹಿಂಡು ಕಾಣಿಸಿಕೊಂಡಿದ್ದು, ಯಾವದೇ ಹಾನಿ ಸಂಭವಿಸಿಲ್ಲ ಎಂದು ಅರಣ್ಯ ವಲಯ ಅಧಿಕಾರಿ ನೆಹರು ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅತ್ತೂರು ನಲ್ಲೂರು ಮೀಸಲು ಅರಣ್ಯದತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್ ಮತ್ತಿತರ ಸಿಬ್ಬಂದಿಗಳ ತಂಡ ಕಾಡಾನೆಗಳಿಂದ ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದು, ಗ್ರಾಮದಿಂದ 500 ಮೀ ಅಂತರದಲ್ಲಿ ಆನೆಗಳ ಹಿಂಡು ಇರುವದಾಗಿ ಮಾಹಿತಿ ನೀಡಿದ್ದಾರೆ. ಈ ವ್ಯಾಪ್ತಿಯ ನಾಗರಿಕರು ಮತ್ತು ಕೂಲಿ ಕಾರ್ಮಿಕರು ಎಚ್ಚರವಹಿಸುವಂತೆ ಕೋರಿದ್ದಾರೆ.