ಕುಶಾಲನಗರ, ಏ. 7: ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆ ಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಆಡಲ್ಪಡುತ್ತಿದ್ದ ದಿನನಿತ್ಯದ ಚಟುವಟಿಕೆ ಗಳಾಗಿದ್ದವು ಎಂದು ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೆಷನ್ ಜಂಟಿ ಕಾರ್ಯದರ್ಶಿ ಎಚ್. ಎಸ್. ಉತ್ತಪ್ಪ ಹೇಳಿದರು.

ಚಿಕ್ಕ ಅಳುವಾರದಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಕಬಡ್ಡಿ, ವಾಲಿಬಾಲ್ ಹಾಗೂ ಥ್ರೋ ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಉನ್ನತ ವ್ಯಾಸಂಗದ ದೃಷ್ಟಿಯಿಂದ ಹಾಗೂ ಮುಂದಿನ ಉಜ್ವಲ ಭವಿಷ್ಯದ ದೃಷ್ಟಿಯಿಂದ ಇಂತಹ ಕ್ರೀಡಾ ಚಟುವಟಿಕೆಗಳು ಇದೀಗ ಸಹಕಾರಿಯಾಗುತ್ತವೆ. ಕ್ರಿಕೆಟ್ ಮತ್ತು ಹಾಕಿ ಕ್ರೀಡೆಗಳಿಗೆ ಪ್ರೋತ್ಸಾಹ ದೊರಕಿದಂತೆ ದೇಸಿ ಕ್ರೀಡೆಯಾದ ಕಬಡ್ಡಿ ಆಟಕ್ಕೂ ಅಷ್ಟೇ ಪ್ರೋತ್ಸಾಹ ದೊರಕುತ್ತಿರುವದು ಸಂತಸದ ವಿಷಯ ಎಂದರು. ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುವ ದೃಷ್ಟಿಯಿಂದ ಒಂದೆಡೆ ಸೇರಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ಸ್ಪರ್ಧೆಗಳು ಉಪಯುಕ್ತವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಪುಷ್ಪ ಕುಟ್ಟಣ್ಣ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಕ್ರೀಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರೋತ್ಸಾಹ ದೊರಕುತ್ತಿದೆ. ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕ್ರೀಡೆಗಳ ಮೂಲಕ ಪ್ರತಿಭೆಗಳನ್ನು ಹೊರತರುವ ಹಾಗೂ ಆರ್ಥಿಕವಾಗಿ ಅವರುಗಳನ್ನು ಸಬಲೀಕರಣ ಗೊಳಿಸುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ವಿ.ರವೀಂದ್ರಚಾರಿ, ಮಂಗಳೂರು ವಿಶ್ವ ವಿದ್ಯಾನಿಲಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ, ಕ್ರೀಡೆಗಳಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಸೋಲನ್ನು ಮನಸ್ಸಿಗೆ ಋಣಾತ್ಮಕವಾಗಿ ತೆಗೆದುಕೊಳ್ಳದೆ ಧನಾತ್ಮಕವಾಗಿ ತೆಗೆದುಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವದು ಪ್ರಮುಖವಾಗಿದೆ ಎಂದು ತಿಳಿಸಿದರು.

ಗಣಕಯಂತ್ರ ವಿಭಾಗದ ನಿರ್ದೇಶಕ ವಾದಿರಾಜ್ ನಂಜನಗೂಡು, ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಕೆ.ಧರ್ಮಪ್ಪ, ಸಹಾಯಕ ಪ್ರಾಧ್ಯಾಪಕ ಶ್ರೀನಾಥ್, ರಾಜ್‍ಕುಮಾರ್ ಮೇಟಿ, ಸಹಾಯಕ ಪ್ರಾಧ್ಯಾಪಕಿ ಗುಣಶ್ರೀ, ವಿವಿಧ ವಿಭಾಗಗಳ ಉಪನ್ಯಾಸಕರು, ಭೋದಕೇತರ ವರ್ಗ, ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಪದವಿ ಕಾಲೇಜುಗಳ ದೈಹಿಕ ನಿರ್ದೇಶಕರು ಹಾಗೂ ಸ್ಪರ್ಧಾಳುಗಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಟಿ.ಕೇಶವಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ವಿದ್ಯಾರ್ಥಿ ಪುನೀತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಜಮೀರ್ ಅಹಮದ್ ವಂದಿಸಿದರು.