ಸೋಮವಾರಪೇಟೆ, ಏ. 6: ಅಕ್ರಮವಾಗಿ ಮರಳನ್ನು ಸಾಗಾಟಗೊಳಿಸುತ್ತಿದ್ದ ಟಿಪ್ಪರ್ ವಾಹನವನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ಮತ್ತು ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಇಲ್ಲಿಗೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ರಾತ್ರಿ 12.15ರ ಸುಮಾರಿಗೆ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಡಿವೈಎಸ್‍ಪಿ ಸಂಪತ್‍ಕುಮಾರ್ ಹಾಗೂ ಸಿಬ್ಬಂದಿಗಳು, ಮರಳು ಸಹಿತ ಟಿಪ್ಪರ್ ವಾಹನ (ಕೆ.ಎ. 12-ಬಿ.0523)ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಮಾಲೀಕರು ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ನಗರದ ಕಾಲೇಜು ರಸ್ತೆ ನಿವಾಸಿ ಮೊಗಪ್ಪ ಅವರ ಮನೆಯ ಮುಂಬಾಗಿಲನ್ನು ಒಡೆದಿರುವ ಕಳ್ಳರು, ಮನೆಯೊಳಗಿನ ಬೀರುವಿನಲ್ಲಿಟ್ಟಿದ್ದ 45 ಸಾವಿರ ಮೌಲ್ಯದ ಚಿನ್ನದ ಓಲೆ, 6 ಜತೆ ಬೆಳ್ಳಿಯ ಕಾಲು ಚೈನ್‍ನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.