ಸುಂಟಿಕೊಪ್ಪ, ಏ. 7: ರಾಜಕೀಯ ಕ್ಷೇತ್ರದಲ್ಲಿ ಶಾಶ್ವತ ಮಿತ್ರರೂ ಇರುವದಿಲ್ಲ ಶಾಶ್ವತ ಶತ್ರುಗಳು ಇರುವದಿಲ್ಲ ಎಂಬ ಮಾತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದ ಧುರೀಣರುಗಳು ಪರಸ್ಪರ ವಾಚಾಮಗೋಚರವಾಗಿ ನಿಂದಿಸುವದು, ಟೀಕಿಸುವದು, ಆರೋಪ ಪ್ರತ್ಯಾರೋಪ ಮಾಡುವದು ಮಾಮೂಲಿಯಾಗಿದೆ.
ಆದರೆ ಸುಂಟಿಕೊಪ್ಪದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‍ನ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಸುಂಟಿಕೊಪ್ಪ ಗ್ರಾ. ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಬಿಜೆಪಿ ತಾ. ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಇವರುಗಳು ಪಕ್ಷ ಬೇಧ ಮರೆತು ಗ್ರಾಮದ ಅಭಿವೃದ್ಧಿ ಬಗ್ಗೆ ಒಟ್ಟಿಗೆ ಚರ್ಚಿಸುತ್ತಿರುವದು ನೆರೆದಿದ್ದ ಜನರ ಗಮನ ಸಳೆಯಿತು. ಚುನಾವಣೆ ವೇಳೆ ಮಾತ್ರ ಪಕ್ಷ ರಾಜಕೀಯ ಉಳಿದ ವೇಳೆ ಜನರ ಶ್ರೇಯೋಭಿವೃದ್ಧಿ, ಅಭಿವೃದ್ಧಿ ಕಡೆ ಚಿಂತನೆ ಎಂಬ ಸಂದೇಶ ರವಾನಿಸಿರುವದು ಕಂಡು ಬಂತು.