ಮಡಿಕೇರಿ, ಏ. 7: ವಿಶ್ವ ಆರೋಗ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ರೋಟರಿ ಮಿಸ್ಟಿಹಿಲ್ಸ್, ಮಡಿಕೇರಿ ರೋಟರಿ ಸಂಸ್ಥೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಜಿಲ್ಲಾ ಘಟಕ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಜಿಲ್ಲಾ ಘಟಕ, ನಾಲ್‍ನಾಡ್ ಕೊಡವ ಅಸೋಸಿಯೇಷನ್ ಹಾಗೂ ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಅಸೋಸಿಯೇಷನ್ ಸಹಯೋಗದಲ್ಲಿ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಶ್ವಿನಿ ಆಸ್ಪತ್ರೆಯ ಸೇವಾ ಕಾಳಜಿಯನ್ನು ಶ್ಲಾಘಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಗಮನ ಅಗತ್ಯ. ಸರ್ಕಾರದಿಂದ ಮಾತ್ರ ಈ ಯೋಜನೆಯ ಯಶಸ್ಸು ಅಸಾಧ್ಯ. ಜನತೆಯ ಸಹಕಾರವು ಅಗತ್ಯವೆಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ
(ಮೊದಲ ಪುಟದಿಂದ) ಅಧಿಕಾರಿ ಡಾ. ಓ. ಶ್ರೀರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅಶ್ವಿನಿ ಆಸ್ಪತ್ರೆ ಸಾಮಾಜಿಕ ಕಳಕಳಿಯಿಂದ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಅದರೊಂದಿಗೆ ಸರ್ಕಾರದ ಹಲವು ಆರೋಗ್ಯ ಸೇವೆಯನ್ನು ಅಳವಡಿಸಿಕೊಂಡು ಸೇವಾ ಚಟುವಟಿಕೆಯನ್ನು ಮಾಡಿದಲ್ಲಿ ಸಂಸ್ಥೆಗೂ ಹೆಸರು ಹಾಗೂ ಹೆಚ್ಚು ಜನರಿಗೆ ಆರೋಗ್ಯ ಸೇವೆಯೂ ತಲಪಿದಂತಾಗುತ್ತದೆ ಎಂದರು.
ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ರೋಟರಿ ಮಿಸ್ಟಿಹಿಲ್ಸ್ ಹಾಗೂ ಮುಳಿಯ ಫೌಂಡೇಶನ್ ವತಿಯಿಂದ ನಾಪೋಕ್ಲುವಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಕೈಗೊಂಡಿದೆ. ಜಿಲ್ಲಾಡಳಿತದ ಸಹಕಾರವೂ ಈ ಅಭಿಯಾನಕ್ಕೆ ಅಗತ್ಯವಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳ ಸಹಕಾರವನ್ನು ಕೋರಿದರು.
ಈ ಸಂದರ್ಭ ಅಶ್ವಿನಿ ಆಸ್ಪತ್ರೆಯ ಟ್ರಸ್ಟ್ ಅಧ್ಯಕ್ಷ ಬಿ.ಕೆ. ಕೃಷ್ಣ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಅಬ್ದುಲ್ ಅಜೀಜ್, ನಾಲ್‍ನಾಡ್ ಕೊಡವ ಅಸೋಸಿಯೇಷನ್ ಅಧ್ಯಕ್ಷ ಪೂಣಚ್ಚ, ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಡಾ. ಬೋಪಣ್ಣ ಹಾಗೂ ಇನ್ನಿತರರು ಇದ್ದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಅಶ್ವಿನಿ ಆಸ್ಪತ್ರೆ ಟ್ರಸ್ಟಿ ಎಂ.ಸಿ. ಗೋಖಲೆ ಆಸ್ಪತ್ರೆಯ ಸೇವಾ ಚಟುವಟಿಕೆ, ಸಂಘ - ಸಂಸ್ಥೆಗಳ ಸಹಕಾರದ ಮಾಹಿತಿ ನೀಡಿದರು.
ಡಾ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.