ಸಿದ್ದಾಪುರ: ಏ. 7: ದಿಡ್ಡಳ್ಳಿಯಿಂದ ಬೆಂಗಳೂರಿಗೆ ನಿರಾಶ್ರಿತರಿಂದ ವಸತಿಗಾಗಿ ಆಗ್ರಹಿಸಿ ತಾ.7 ರಂದು (ಇಂದು) ಬೆಂಗಳೂರು ಕಾಲ್ನಡಿಗೆ ಜಾಥ ನಡೆಯಲಿದೆ ಎಂದು ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ತಿಳಿಸಿದ್ದಾರೆ.

ದಿಡ್ಡಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳುಗಳಿಂದ ಆದಿವಾಸಿಗಳು ರಸ್ತೆ ಬದಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿ ವಾಸವಾಗಿದ್ದರೂ, ಸರಕಾರ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ತಾ. 7 ರಂದು ಬೆಳಗ್ಗೆ 10.30 ಕ್ಕೆ ದಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆಯ ಮೂಲಕ ತೆರಳಿ ತಾ. 14 ರಿಂದ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಇಂದು ಬೆಳಗ್ಗೆ 10.30ಕ್ಕೆ ಪ್ರಜಾ ಹೋರಾಟಗಾರ ಜಿಘ್ನೇಶ್ ಮೇವಾನಿ ಕಾಲ್ನಡಿಗೆ ಜಾಥವನ್ನು ಉದ್ಘಾಟಿಸ ಲಿದ್ದು, ಅಧ್ಯಕ್ಷತೆಯನ್ನು ಗೌರಿ ಲಂಕೇಶ್ ವಹಿಸಲಿದ್ದಾರೆ. ಹೋರಾಟ ಸಮಿತಿ ಪ್ರಮುಖರಾದ ಎ.ಕೆ ಸುಬ್ಬಯ್ಯ, ಸಿರಿಮನೆ ನಾಗರಾಜ್ ಸೇರಿದಂತೆ ಇನ್ನಿತರ ಮುಖಂಡರುಗಳು ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಡಳಿತ ಅವೈಜ್ಞಾನಿಕವಾಗಿ 3 ಕಡೆ ಜಾಗ ಗುರುತಿಸಿದ್ದು, ಅಲ್ಲಿ ಆದಿವಾಸಿಗಳಿಗೆ ವಾಸಿಸಲು ಸಾಧ್ಯವಿಲ್ಲ. ಆದಿವಾಸಿಗಳು ತಲತಲಾಂತರಗಳಿಂದ ಕಾಡಿನಲ್ಲಿ ವಾಸಮಾಡಿಕೊಂಡಿದ್ದು, ದಿಡ್ಡಳ್ಳಿಯ ಜಾಗ ಅರಣ್ಯ ಪೈಸಾರಿ ಎಂದು ನಮೂದಿಸಲಾಗಿದೆ. ಹೀಗಾಗಿ ಸರಕಾರ ದಿಡ್ಡಳ್ಳಿಯಲ್ಲಿಯೇ ಸೂರನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಆದಿವಾಸಿ ಮುಖಂಡ ಸ್ವಾಮಿಯಪ್ಪ ಮಾತನಾಡಿ, ಸರಕಾರವು ನೀಡಿದ ಭರವಸೆಯನ್ನು ಈಡೇರಿಸು ವಲ್ಲಿ ವಿಫಲವಾಗಿದ್ದು, ಬೇರೆ ಬೇರೆ ಪ್ರದೇಶದಲ್ಲಿ ಜಾಗವನ್ನು ನೀಡಿ ಆದಿವಾಸಿಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡುತ್ತಿರುವದಾಗಿ ಆರೋಪಿಸಿದರು. ಬೆಂಗಳೂರಿನ ವಿಧಾನ ಸೌಧ ಮುಂಭಾಗ ಅನಿರ್ಧಿಷ್ಟಾವಧಿ ಕಾಲ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಸರಕಾರ ದಿಡ್ಡಳ್ಳಿಯಲ್ಲಿಯೇ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿ ಪ್ರಮುಖರಾದ ಸಿರಿಮನೆ ನಾಗರಾಜ್ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವದಾಗಿ ತಿಳಿಸಿದ್ದರು. ಜಿಲ್ಲೆಯ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಠಿಸುತ್ತಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯ ನಿವೇಶನ ರಹಿತರು ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಇದೇ ಸಂದರ್ಭ ಚಲೋ ಬೆಂಗಳೂರು ಕಾಲ್ನಡಿಗೆ ಜಾಥದ ಕರಪತ್ರವನ್ನು ಬಿಡುಗಡೆಗೊಳಿಸಿದರು. ಗೋಷ್ಠಿಯಲ್ಲಿ ಜೇನುಕುರುಬರ ಮಲ್ಲ, ಜೆ.ಕೆ. ರಾಮ ಸೇರಿದಂತೆ ಇನ್ನಿತರರು ಇದ್ದರು.