ಮಡಿಕೇರಿ, ಏ. 7: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭದ್ರತೆಗಾಗಿ ಕೊಡಗಿನಿಂದ ಒಟ್ಟು 100 ಮಂದಿ ಪೊಲೀಸರನ್ನು ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಖಾತರಿಪಡಿಸಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ತಾ. 9 ರಂದು ನಡೆಯುವ ಈ ಚುನಾವಣೆ ಸಂಬಂಧ ಭದ್ರತಾ ವ್ಯವಸ್ಥೆಗಾಗಿ ಪೊಲೀಸರನ್ನು ನಿಯೋಜಿಸಿರುವ ಬಗ್ಗೆ ‘ಶಕ್ತಿ’ ಪ್ರಶ್ನಿಸಿದಾಗ ಅವರು ಈ ಮಾಹಿತಿ ನೀಡಿದ್ದಾರೆ.

ವೀರಾಜಪೇಟೆ ಉಪ ವಿಭಾಗದ ಡಿ.ವೈ.ಎಸ್.ಪಿ. ನಾಗಪ್ಪ ನೇತೃತ್ವದಲ್ಲಿ ಇಬ್ಬರು ಪೊಲೀಸ್ ವೃತ್ತ ನಿರೀಕ್ಷಕರು, 13 ಪೊಲೀಸ್ ಉಪ ನಿರೀಕ್ಷಕರು ಸೇರಿದಂತೆ 100 ಸಿಬ್ಬಂದಿಗಳ ತಂಡ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿರುವ ಅವರು, ಎರಡು ತಂಡಗಳಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡುವಿನಲ್ಲಿ ಭದ್ರತಾ ವ್ಯವಸ್ಥೆಗೆ ನಿಯೋಜನೆಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

- ಟಿ.ಜಿ. ಸತೀಶ್