ಮಡಿಕೇರಿ, ಏ. 7 ನಗರಸಭೆಯಿಂದ ಸಾರ್ವಜನಿಕರಿಗೆ ಒದಗಿಸಲಾಗುವ ಹಲವು ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಮಾಹಿತಿ ಒಳಗೊಂಡ ಎಲ್‍ಇಡಿ ವಾಲ್‍ನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಾರ್ವಜನಿಕರಿಗೆ ಸಮರ್ಪಿಸಿದರು.

ನಗರಸಭೆಯ ಆವರಣದಲ್ಲಿ ನೂತನವಾಗಿ ಅಳವಡಿಸಿರುವ ಎಲ್‍ಇಡಿ ವಾಲ್‍ನಲ್ಲಿ ಇ-ಆಸ್ತಿ, ಜನನ ಮತ್ತು ಮರಣ ಪ್ರಮಾಣ ದಾಖಲೆಗಳ ಗಣಕೀಕರಣವನ್ನು ತಂತ್ರಾಂಶ ನಿರ್ಮಾಣ, ವ್ಯಾಪಾರ, ಹೀಗೆ ನಾನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವದು ಇದರ ಉದ್ದೇಶವಾಗಿದೆ.

ನಾಗರಿಕರು ಈ ತಂತ್ರಾಂಶಗಳ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ಸೇವೆಗಳನ್ನು ಸರಳವಾಗಿ ಪಡೆಯಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಹೆಚ್ಚಿನ ರೀತಿಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸಾರ್ವಜನಿಕ ಸಹಭಾಗಿತ್ವ ಸಾಧಿಸುವ ದೃಷ್ಟಿಯಿಂದ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯಿಂದ ಸೇವಾ ವಿಲೇವಾರಿ ದತ್ತಾಂಶವನ್ನು ಎಲ್‍ಇಡಿ ಮೂಲಕ ನೇರ ಪ್ರಸಾರ ಮಾಡುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಈ ತಂತ್ರಾಂಶವು ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆ, ನಲ್ಲಿ ಮತ್ತು ಒಳಚರಂಡಿ ಸಂಪರ್ಕ ಮತ್ತು ನಾಗರಿಕರ ದೂರುಗಳಿಗೆ ಸಂಬಂಧಪಟ್ಟಂತೆ ದಾಖಲಾದ ಅರ್ಜಿಗಳ ಸಂಖ್ಯೆ ಮತ್ತು ವಿಲೇವಾರಿ ಮಾಡಿದ ಅರ್ಜಿಗಳ ಸಂಖ್ಯೆಯ, ದಾಖಲಾದ ಜನನ-ಮರಣಗಳ ಸಂಖ್ಯೆಯ ಕ್ಷಣ ಕ್ಷಣದ ಮಾಹಿತಿ ಮತ್ತು ಸೇವೆಗಳನ್ನು ಪಡೆಯುವ ವಿಧಾನ ಮತ್ತು ಅವಶ್ಯಕತೆ ಇರುವ ದಾಖಲೆಗಳನ್ನು ಎಲ್‍ಇಡಿ ಟಿ.ವಿ.ಗಳಲ್ಲಿ ಸ್ವಯಂಚಾಲಿತವಾಗಿ ಪ್ರದರ್ಶನ ಗೊಳ್ಳಲಿದೆ ಎಂದು ಪೌರಾಯುಕ್ತೆ ಬಿ. ಶುಭಾ ಮಾಹಿತಿ ನೀಡಿದರು.

ನಗರಸಭೆ ಅಧಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷÀ ಟಿ.ಎಸ್.ಪ್ರಕಾಶ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭೆ ಸದಸ್ಯರಾದ ಲಕ್ಷ್ಮೀ, ಪ್ರಕಾಶ್ ಆಚಾರ್ಯ, ಜುಲೇಕಾಬಿ, ಅನಿತಾ ಪೂವಯ್ಯ ಇತರರು ಇದ್ದರು.