ಮಡಿಕೇರಿ, ಏ.7 : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವದರಿಂದ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಳಮಟ್ಟದಿಂದಲೇ ಬಲಪಡಿಸುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕೆÀ್ಷ ಮೀನಾಕ್ಷಿ ನಟರಾಜನ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಮತ್ತು ಸರಕಾರದ ಜನಪರ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕು ಬೇಳೂರು ಪಂಚಾಯಿತಿ ವ್ಯಾಪ್ತಿಯ ಕಾರೆ ಕೊಪ್ಪ, ಕೂಡಿಗೆ, ಚೆಟ್ಟಳ್ಳಿ, ಮದೆ ಹಾಗೂ ಸಂಪಾಜೆಯ ಕೊಯನಾಡು ಗ್ರಾಮಗಳಲ್ಲಿ ಮೀನಾಕ್ಷಿ ನಟರಾಜನ್ ಸಂವಾದ ನಡೆಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಹೋರಾಟ, ಪಂಚಾಯತ್ ರಾಜ್ ತಿದ್ದುಪಡಿ, ಗ್ರಾಮ ಸ್ವರಾಜ್ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹಾಕಿಕೊಂಡ ಕಾರ್ಯಕ್ರಮದ ಬಗ್ಗೆ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ವಿವರಿಸಿದರು.
ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎಂ.ಸಂದೀಪ್, ರಾಜ್ಯವಲಯ ಸಂಯೋಜಕ ರಂಗಸ್ವಾಮಿ, ಜಿ.ಪಂ ಸದಸೆÀ್ಯ ಕೆ.ಪಿ.ಚಂದ್ರಕಲಾ, ಸುನಿತಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್ ಮೊದಲಾದವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.