ಗೋಣಿಕೊಪ್ಪಲು, ಏ. 7: ಗೋಣಿಕೊಪ್ಪಲು ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮ್ಮತ್ತಿಯ ಮಾಚಿಮಂಡ ಸುವಿನ್ಗಣಪತಿ ಅವರನ್ನು ಕಾವಾಡಿ ಶ್ರೀ ಭಗವತಿ ದೇವಸ್ಥಾನ ಆವರಣದಲ್ಲಿ ಕಾವಾಡಿ, ಕಾರ್ಮಾಡು ಗ್ರಾಮಸ್ಥರ ಪರವಾಗಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭ ಮಾತನಾಡಿದ ಸುವಿನ್ ಗಣಪತಿ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಕೃಷಿಕರ ಆರ್ಥಿಕತೆಯನ್ನು ಉತ್ತಮ ಪಡಿಸಿಕೊಳ್ಳಲು ಹಲವು ಯೋಜನೆಗಳಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು. ರೈತರಿಗೆ ಉಚಿತ ಗ್ರಾಮೀಣ ಗೋದಾಮು, ಸಂತೆ ಮಾರುಕಟ್ಟೆ ಹಾಗೂ ರೈತರ ವಿಮಾಯೋಜನೆ ಸೌಲಭ್ಯವನ್ನು ಎಪಿಎಂಸಿ ಮೂಲಕ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷರ ಅವಧಿಯಲ್ಲಿ ಈ ವಿಭಾಗದ ರೈತಾಪಿ ವರ್ಗಕ್ಕೆ ಉತ್ತಮ ಕೆಲಸಗಳಾಗಲಿ ಎಂದು ನೆಲ್ಲಮಕ್ಕಡ ಗಣಪತಿ ಅವರು ಶುಭಹಾರೈಸಿದರು.
ಸನ್ಮಾನ ಸಂದರ್ಭ ಕಾವಾಡಿಚಂಡ ಯು. ಗಣಪತಿ, ಮಾಚಿಮಂಡ ವಸಂತ್, ಕಾರ್ಮಾಡು ಗ್ರಾ.ಪಂ.ಸದಸ್ಯ ಮುಕ್ಕಾಟಿರ ಸಂತೋಷ್, ಪ್ರಧಾನ ಕಾರ್ಯದರ್ಶಿ ಪ್ರಿನ್ಸ್ಗಣಪತಿ, ಉಪ ಕಾರ್ಯದರ್ಶಿ ಮಾಚಿಮಂಡ ರಾಜ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸ್ಪಷ್ಟನೆ
ಕಾವಾಡಿ ಶ್ರೀ ಭಗವತಿ ದೇವಸ್ಥಾನ ವತಿಯಿಂದ ತಾ. 5 ರಿಂದ ಪ್ರಾರಂಭಗೊಂಡು ತಾ. 14 ರವರೆಗೆ ವಾರ್ಷಿಕೋತ್ಸವ ನಡೆಯಲಿದ್ದು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಸದರಿ ದೇವಸ್ಥಾನಕ್ಕೆ ಮಾಚಿಮಂಡ ವಸಂತ್ ಹಾಗೂ ಮುಕ್ಕಾಟಿರ ಕಸ್ತೂರಿ ಅವರು ಇಬ್ಬರು ದೇವತಕ್ಕರಿದ್ದು ಉತ್ಸವದ ಉಸ್ತುವಾರಿ ವಹಿಸಲಿರುವದಾಗಿ ಕಾರ್ಯದರ್ಶಿ ಪ್ರಿನ್ಸ್ ಗಣಪತಿ ಸ್ಪಷ್ಟಪಡಿಸಿದ್ದಾರೆ.