ಮಡಿಕೇರಿ, ಏ. 6 : ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆಗೈದಿರುವ ಮೂವರು ಆರೋಪಿಗಳಿಗೆ ಜೀವಾವಧಿ ಹಾಗೂ ಸಹಕರಿಸಿದ ಇನ್ನೂ ಮೂವರಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.ಕಳೆದ ತಾ. 4.11.2014ರಂದು ರಾತ್ರಿ ಪಾರಾಣೆ ವ್ಯಾಪ್ತಿಯ ಕಿರುಂದಾಡು ಗ್ರಾಮ ನಿವಾಸಿ, ಪಾರಾಣೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಪಾಡಿಚೆಟ್ಟಿರ ಭೀಮಯ್ಯ ಹಾಗೂ ಲೀಲಾವತಿ ಅವರ ಪುತ್ರ ದಿನೇಶ್ (31) ಎಂಬಾತ ಅಂಗಡಿ ಮುಚ್ಚಿ ತನ್ನ ಮನೆಯತ್ತ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ನಾಟೋಳನ ಪ್ರಕಾಶ್ ಎಂಬವರಿಗೆ ಸೇರಿದ ತೋಟದಲ್ಲಿ ರಸ್ತೆಗೆ ಅಡ್ಡಲಾಗಿ ಕೇಬಲ್ ಕಟ್ಟಿ ದಿನೇಶ್ ಬರುತ್ತಿದ್ದ ದ್ವಿಚಕ್ರ ವಾಹನ (ಕೆಎ12-ಕೆ3640)ನನ್ನು ಬೀಳಿಸಿ ಆತನನ್ನು ಗುಂಡಿಕ್ಕಿ ಹತ್ಯಗೈದು ಮೃತದೇಹ ಹಾಗೂ ಸ್ಕೂಟರನ್ನು ತೋಟದೊಳಗೆ ಎಸೆದು ಆತನ ಬಳಿಯಿದ್ದ ಚಿನ್ನದ ಸರ ಹಾಗೂ ರೂ. 25 ಸಾವಿರ ಹಣವನ್ನು ಕಸಿದು ಹಂತಕರು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೊಲೀಸರು ತನಿಖೆ ಕೈಗೊಂಡು ಪ್ರಮುಖ ಆರೋಪಿ ಬಾವಲಿ ಗ್ರಾಮದ ಬಿದ್ದಂಡ ಕುಂಞಪ್ಪ (ಜೀವನ್), ಕುಂಜಿಲಗೇರಿ ಗ್ರಾಮದ ಚೊಟ್ಟೇರ ಈರಪ್ಪ, ಬಾವಲಿ ಗ್ರಾಮದ ದೇರಂಡ ಅಯ್ಯಪ್ಪ ಅವರುಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಸಂದರ್ಭ ಹಣಕ್ಕಾಗಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅಂದು ರಾತ್ರಿ 8.30 ಗಂಟೆ ವೇಳೆಗೆ ಕುಂಞಪ್ಪ ತನ್ನ ಜೀಪಿನಲ್ಲಿ (ಕೆಎ 12 ಎಂ 3076) ಈರಪ್ಪ ಹಾಗೂ ಅಯ್ಯಪ್ಪನನ್ನು ಕರೆದುಕೊಂಡು ಬಂದೂಕು ಸಹಿತ ಕಿರುಂದಾಡು ಗ್ರಾಮದ ಕಿಕ್ಕೇರದಿಂದ ಕೋಕೇರಿಗೆ ತೆರಳುವ ರಸ್ತೆಯ ಪಕ್ಕದ ತೋಟದಲ್ಲಿ ಹೊಂಚು ಹಾಕಿ ಹತ್ಯೆಗೈದು ಪರಾರಿಯಾಗಿರುವದು ತಿಳಿದು ಬಂದಿದೆ. ವಿಚಾರಣೆ ಸಂದರ್ಭ ಕುಂಞಪ್ಪ 10.11.14ರಂದು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗೆ ಬಾವಲಿಯ ಬಿದ್ದಂಡ ಪೆಮ್ಮಯ್ಯ (ಪ್ರಥ್ವಿ) ತನ್ನ ಮನೆಯಲ್ಲಿ ರಕ್ಷಣೆ ನೀಡಿದ್ದು, ನಂತರ ಆತನನ್ನು ಚೇಲಾವರದ ಕೋಳಿಮಾಡ ವೆಂಕಟೇಶ್ ಎಂಬವರ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ವೆಂಕಟೇಶ್ ಆತನಿಗೆ ರಕ್ಷಣೆ ನೀಡಿ ಬಳಿಕ ಬೆಂಗಳೂರಿನಲ್ಲಿರುವ ಬಲ್ಲಾರಂಡ ಮನು ಎಂಬಾತನ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಪೊಲೀಸರ ತನಿಖೆ ವೇಳೆ ಈ ವಿಚಾರ ಬಯಲಿಗೆ ಬಂದಿದ್ದು, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು, ಐವರು ಆರೋಪಿಗಳ ಮೇಲಿನ ಆರೋಪ ಸಾಭೀತಾಗಿರುವದರಿಂದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕೊಲೆ ಮಾಡಿದ ಅಪರಾಧಕ್ಕಾಗಿ ಕುಂಞಪ್ಪ, ಈರಪ್ಪ, ಅಯ್ಯಪ್ಪ ಈ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ. 20 ಸಾವಿರ ದಂಡ , ಚಿನ್ನ ಹಾಗೂ ಹಣ ದರೋಡೆ ಮಾಡಿದ ಅಪರಾಧಕ್ಕಾಗಿ 7 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ತಲಾ ರೂ. 3 ಸಾವಿರ ದಂಡ ಹಾಗೂ ಪೊಲೀಸರಿಂದ ತಪ್ಪಿಸಿಕೊಂಡು ಹೋದ ಅಪರಾಧಕ್ಕಾಗಿ 2 ವರ್ಷಗಳ ಕಠಿಣ ಸಜೆ ಮತ್ತು ತಲಾ ರೂ. 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದರೊಂದಿಗೆ ದಾರಿಗೆ ಅಡ್ಡಕಟ್ಟಿದ ಅಪರಾಧಕ್ಕಾಗಿ ಒಂದು ವರ್ಷ ಕಾರಾಗೃಹ ವಾಸ ಮತ್ತು ತಲಾ ರೂ. 500 ದಂಡ ವಿಧಿಸಿದ್ದಾರೆ.

ಬಿದ್ದಂಡ ಪೆಮ್ಮಯ್ಯ ಹಾಗೂ ಕೋಳಿಮಾಡ ವೆಂಕಟೇಶ್ ಅವರುಗಳಿಗೆ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಅಪರಾಧಕ್ಕಾಗಿ 2 ತಿಂಗಳ ಸೆರೆವಾಸ ಹಾಗೂ ತಲಾ ರೂ. 150 ದಂಡ ವಿಧಿಸಿದ್ದಾರೆ.

ಇದಲ್ಲದೆ ಈರಪ್ಪನಿಗೆ ಕೊಲೆ ಮಾಡಲು ಕೋವಿ ನೀಡಿದ ಅಪರಾಧಕ್ಕಾಗಿ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ರೂ. 3 ಸಾವಿರ ದಂಡ ವಿಧಿಸುವಂತೆ ತೀರ್ಪಿತ್ತಿದ್ದಾರೆ. ಒಟ್ಟು ರೂ. 87,300 ದಂಡದ ಹಣದಲ್ಲಿ ರೂ. 85 ಸಾವಿರವನ್ನು ಮೃತ ದಿನೇಶ್‍ನ ಪತ್ನಿಗೆ ಶೇ. 70ರಂತೆ ಹಾಗೂ ಶೇ. 30ರಂತೆ ಹಂಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸರಕಾರದ ಪರ ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್ ಖಾನ್ ವಾದ ಮಂಡಿಸಿದ್ದರು.