ಮಡಿಕೇರಿ, ಏ. 7: ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಭಾರೀ ಸಿಡಿಲು - ಗುಡುಗು, ಆಲಿಕಲ್ಲು ಸಹಿತ ಮಳೆಯಾಗಿದ್ದು, ಕಾದಾರಿದ್ದ ಭುವಿಗೆ ತಂಪೆರದಂತಾಗಿದೆ. ಆದರೆ ಮಳೆಯ ಆರ್ಭಟಕ್ಕೆ ಕೆಲವು ಕಡೆಗಳಲ್ಲಿ ಹಾನಿಯೂ ಸಂಭವಿಸಿದೆ. ಕೆಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ಇನ್ನೂ ಕೆಲವಡೆ ಮನೆ, ಗೋಡೆ ವಿದ್ಯುತ್ ಉಪಕರಣಗಳಿಗೆ ಹಾನಿ ಸಂಭವಿಸಿದೆ.ಚೆಟ್ಟಳ್ಳಿಯಲ್ಲಿ ಉರುಳಿದ ಮರ ಚೆಟ್ಟಳ್ಳಿ : ಚೆಟ್ಟಳ್ಳಿಯಲ್ಲಿ ನಿನ್ನೆ ರಾತ್ರಿ ಹೊಡೆದ ಭಾರೀ ಮಳೆಯಿಂದ ಭಾರೀ ಗಾತ್ರದ ಮರ ಮುಖ್ಯ ರಸ್ತೆಗೆ ಉರುಳಿ ಬಿದ್ದು, ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ನಡೆದಿದೆ.ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಬದಿ ಇರುವ ಭಾರೀ ಗಾತ್ರದ ಬಳಂಜಿ ಮರವೊಂದು ರಸ್ತೆಗೆ ಅಡ್ಡಲಾಗಿ
(ಮೊದಲ ಪುಟದಿಂದ) ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರ ಕೊಂಬೆಗಳು ಪಕ್ಕದ ತೋಟದ ಕಾಶಿ ದೇವಯ್ಯ ಅವರ ತೋಟಕ್ಕೆ ಬಿದ್ದು ನಷ್ಟ ಸಂಭವಿಸಿದೆ.
ಮರಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಮರಕತ್ತರಿಸುವ ಯಂತ್ರದೊಂದಿಗೆ ತುಂಡರಿಸಿ ವಾಹನ ಸಂಚಾರಕ್ಕೆ ಅನುವು ಮಾಡುವ ದೃಶ್ಯ ಕಂಡುಬಂತು. ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಬಸ್ಸಿನಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಳಜಿ ವಹಿಸಿದ್ದರು.
ಮಳೆಯ ರಭಸಕ್ಕೆ ಪುತ್ತರಿರ ಐನ್‍ಮನೆಗೆ ತೆರಳುವ ರಸ್ತೆಯಲ್ಲಿ ಮರವೊಂದು ಬಿದ್ದು ಕೆಲಕಾಲ ಸಂಚಾರಕ್ಕೆ ತೊಂದರೆಯೊಂದಿಗೆ ವಿದ್ಯುತ್ ತಂತಿಯ ಮೇಲೆ ಬಿದ್ದು ತಂತಿಗಳೆಲ್ಲ ತುಂಡಾಗಿದೆ.
ಕೂಡಿಗೆ: ಕೂಡಿಗೆ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಿಂದಾಗಿ ಜಗದೀಶ್ ಎಂಬವರ ದಿನಸಿ ಅಂಗಡಿಗೆ ರಾತ್ರಿ ಮಳೆ ನೀರು ನುಗ್ಗಿ ಅಂಗಡಿಯಲ್ಲಿ ದಿನಸಿ ಸಾಮಾಗ್ರಿಗಳು ತೀರಾ ಹಾಳಾಗಿ ಅಧಿಕ ನಷ್ಟ ಉಂಟಾಗಿದೆ.
ಮನೆಗೆ ಹಾನಿ: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ರಫೀಕ್ ಎಂಬವರಿಗೆ ಸೇರಿದ ಮನೆಯ ಇಪ್ಪತ್ತಕ್ಕೂ ಅಧಿಕ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿ ಒಡೆದು ಹೋಗಿವೆ.
ರಾತ್ರಿ ಸುರಿದ ಮಳೆಯಿಂದಾಗಿ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಇನ್ನಿತರ ವಸ್ತುಗಳು ನೀರು ಪಾಲಾಗಿವೆ.
ರಾತ್ರಿ ಇದ್ದಕ್ಕಿದ್ದಂತೆ ಬಂದ ಮಳೆ, ಗಾಳಿಯಿಂದಾಗಿ ರಫೀಕ್ ಮತ್ತು ಮನೆಯವರು ಪ್ರಾಣಾಪಯದಿಂದ ಪಾರಾಗಿದ್ದಾರೆ.
ತಡೆಗೋಡೆ: ಕೂಡುಮಂಗಳೂರು ಕೈಗಾರಿಕಾ ಬಡಾವಣೆಯ ಕಾಫಿ ಘಟಕದ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮತ್ತು ಮಳೆಯ ನೀರು ಕೆಳಭಾಗಕ್ಕೆ ಹರಿಯಲು ಸಾಧ್ಯವಾಗದೆ ಪೊಲೀಸ್ ಠಾಣೆಯ ಮುಂಭಾಗದ ತಡೆಗೋಡೆ ನೆಲಕ್ಕುರುಳಿದೆ.
ಅಲ್ಲದೆ, ಕೂಡಿಗೆ, ಸೀಗೆಹೊಸೂರು, ಹುದುಗೂರು ಹಾರಂಗಿ ವ್ಯಾಪ್ತಿಗಳಲ್ಲಿ ಎರಡು ಇಂಚಿಗೂ ಅಧಿಕ ಮಳೆ ಬಿದ್ದಿದೆ.
ಈ ಸ್ಥಳಕ್ಕೆ ಗ್ರಾಮಲೆಕ್ಕಿಗ ಗೌತಮ್, ಗ್ರಾ.ಪಂ ಸದಸ್ಯರುಗಳಾದ ಮಹೇಶ್‍ಕಾಳಪ್ಪ, ಫಿಲೋಮಿನಾ, ಸಾವಿತ್ರಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದರು.
ವೀರಾಜಪೇಟೆ : ವಿರಾಜಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಈ ಮಳೆಯಿಂದ ಉರಿ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪೆರೆಚಿದಂತಾಗಿದೆ.
ಅಪರಾಹ್ನದಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ರಾತ್ರಿ 9.30ರ ವೇಳೆ ಗುಡುಗು ಮಿಂಚಿನ ಆರ್ಭಟ ಆರಂಭವಾಗಿ ಮಧ್ಯ ರಾತ್ರಿಯವರೆಗೂ ಮುಂದುವರೆಯಿತು. ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಕೆಲವೆÀಡೆಗಳಲ್ಲಿ ಕತ್ತಲೆಯಲ್ಲಿಯೇ ಕಳೆಯ ಬೇಕಾಯಿತು.
ಪಾಲಂಗಾಲ, ಕೆದಮುಳ್ಳೂರು, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆ ಸುರಿದಿದೆ. ಪಾಲಂಗಾಲ ಗ್ರಾಮದಲ್ಲಿ ಈವರೆಗೆ ನಾಲ್ಕೂವರೆ ಇಂಚುಗಳಷ್ಟು, ಕೆದಮುಳ್ಳೂರು ಗ್ರಾಮದಲ್ಲಿ ನಿನ್ನೆ ಒಂದೇ ದಿನ ರಾತ್ರಿ ಸುಮಾರು ಎರಡು ಇಂಚುಗಳಷ್ಟು ಮಳೆ ಸುರಿದಿದೆ ಎಂದು ಈ ವಿಭಾಗದ ಗ್ರಾಮಸ್ಥರು ತಿಳಿಸಿದ್ದಾರೆ. ವೀರಾಜಪೇಟೆ ವಿಭಾಗಕ್ಕೆ ಸುಮಾರು 22 ಮೀ ಮೀ ಮಳೆ ಸುರಿದಿದೆ.
ಒಡೆಯನಪುರ: ಗುರುವಾರ ರಾತ್ರಿ ಸಮೀಪದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಭಾರಿ ಗಾಳಿ, ಗುಡುಗು-ಸಿಡಿಲು ಸಹಿತವಾಗಿ ಮಳೆಯಾಗಿದೆ. ಇದ್ದಕ್ಕಿದಂತೆ ಬಿರುಗಾಳಿ ಭಾರೀ ಗುಡುಗು ಸಿಡಿಲು ನಡುವೆ ಮಳೆಯಾಯಿತು. ಇದರಿಂದ ಜನರು ತತ್ತರಿಸಿ ಹೋದರು. ಭಾರಿ ಗಾಳಿಗೆ ಅನೇಕ ಮನೆಗಳಲ್ಲಿ ಅಳವಡಿಸಿದ ಶೀಟ್‍ಗಳು ಮತ್ತು ಮನೆಯ ಹೆಂಚುಗಳು ಹಾರಿ ಹೋಗಿದೆ. ಕೊಡ್ಲಿಪೇಟೆ ಪಟ್ಟಣದ ಕೆಲವು ಹಾರ್ಡ್‍ವೇರ್ ಅಂಗಡಿಗಳಲ್ಲಿ ಮಾರಾಟಕ್ಕಾಗಿ ಜೋಡಿಸಿಟ್ಟಿದ್ದ ಬ್ಯಾರಲ್, ಪ್ಲಾಸ್ಟಿಕ್ ಬಿಂದಿಗೆಗಳು ಗಾಳಿಯ ರಭಸಕ್ಕೆ ರಸ್ತೆಯಲ್ಲಿ ಉರುಳಿ ಹೋಗಿವೆ.
ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಮೇಲತಂಸ್ತಿಗೆ ಸಿಡಿಲು ಬಡಿದ ಪರಿಣಾಮ ಕಟ್ಟಡ ಬಿರುಕು ಬಿಟ್ಟಿದೆ. ಸಿಡಿಲಿಗೆ ವಸತಿ ಶಾಲೆಯಲ್ಲಿ ವಿದ್ಯುತ್ ಸರಬರಾಜು ಮಾಡಲು ಅಳವಡಿಸಿದ್ದ ಟ್ರಾನ್ಸ್‍ಫಾರ್ಮರ್ ಸುಟ್ಟು ಹೋಗಿದಲ್ಲದೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಮಾಡುವ ಯುಪಿಎಸ್ ಘಟಕವೂ ಸಿಡಿಲಿಗೆ ಸುಟ್ಟುಹೋಗಿದೆ.
ಸಿಡಿಲಿಗೆ ರೂ. 3 ಲಕ್ಷ ಮೌಲ್ಯದಷ್ಟು ಬೆಲೆ ಬಾಳುವ ವಸ್ತುಗಳು ಸುಟ್ಟುಹೋಗಿ ನಷ್ಟ ಸಂಭವಿಸಿದೆ ಎಂದು ವಸತಿ ಶಾಲೆಯ ಸಿಬ್ಬಂದಿಯೊಬ್ಬರು ತಿಳಿಸಿದರು. ಇದೇ ವೇಳೆ ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದರ ಮೇಲೆ ರಸ್ತೆ ಬದಿಯಲ್ಲಿದ್ದ ಮರದ ಕೊಂಬೆಯೊಂದು ಬಿದ್ದಿದ್ದು, ಪಿಕಪ್ ವಾಹನದ ಮುಂಭಾಗಕ್ಕೆ ಮರದ ಕೊಂಬೆ ಬಿದ್ದ ಕಾರಣದಿಂದ ವಾಹನದ ಹಿಂಭಾಗದಲ್ಲಿದ್ದ ಪ್ರಯಾಣಿಕರಿಗೆ ಅಪಾಯ ಸಂಭವಿಸಲಿಲ್ಲ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 10 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.
ಸುಂಟಿಕೊಪ್ಪ : ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನತೆಗೆ ವರುಣನ ಆಗಮನದಿಂದ ಭೂಮಿಗೆ ತಂಪೆರೆಯಿತು. ತಾ.6 ರಂದು ಮಧ್ಯರಾತ್ರಿ ಸುಂಟಿಕೊಪ್ಪ ಸುತ್ತ ಮುತ್ತ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು, ದಿಢೀರನೆ ಮಳೆ ಸುರಿಯಿತು. ಒಣಗುತ್ತಿದ್ದ ಕಾಫಿ, ಕರಿಮೆಣಸಿನ ಗಿಡಕ್ಕೆ ಈ ಮಳೆಯಿಂದ ಜೀವ ತುಂಬಿತು. ಕಾಫಿ ಬೆಳೆಗಾರರ ಮೋಗದಲ್ಲಿ ಸಂತಸ ಮೂಡಿತು. ಬೆಳಿಗ್ಗೆ ಮತ್ತೆ ತುಂತುರು ಮಳೆ ಸುರಿಯಲಾರಂಭಿಸಿತು ಸುಂಟಿಕೊಪ್ಪ, ಹರದೂರು, ಗದ್ದೆಹಳ್ಳ, ಕೆದಕಲ್, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಅಂದಗೋವೆ, ಕೊಡಗರಹಳ್ಳಿ, ಕಂಬಿಬಾಣೆ, ಚೆಟ್ಟಳ್ಳಿ, ಭೂತನಕಾಡು, ಮಾದಾಪುರ, ಕುಂಬೂರು, ಐಗೂರು, ಗ್ರಾಮ ವ್ಯಾಪ್ತಿಯಲ್ಲಿ ಯುಗಾದಿ ಕಳೆದು ಬಂದು ಹೊಸ ವರ್ಷದ ಮಳೆಯಿಂದ ಬಿಸಿಲಿನ ತಾಪದಿಂದ ಬಸವಳಿದ ಜನತೆಗೆ ಕೊಂಚ ನಿರಾಳ ಒದಗಿಸಿತು.
ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆ ಮುಂದಿನ ವರ್ಷದ ಕಾಫಿ ಕಾಳುಮೆಣಸು ಇಳುವರಿಗೆ ಆಶಾದಾಯಕವಾಗಲಿದೆ ಎಂದು ಕೃಷಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ : ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿಯಲ್ಲಿ ಗುಡುಗು ಮಿಂಚು ಗಾಳಿಯ ರಭಸದೊಂದಿಗೆ ಸುರಿದ ಮಳೆ ಈ ಭಾಗದ ನಾಗರೀಕರನ್ನು ಬೆಚ್ಚಿ ಬೀಳಿಸಿದೆ. ರಾತ್ರಿ 11 ಗಂಟೆ ವೇಳೆಗೆ ಪ್ರಾರಂಭಗೊಂಡ ಗುಡುಗು ಮಿಂಚಿನ ಭರಾಟೆ ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸುವದರೊಂದಿಗೆ ಭಯದ ವಾತಾವರಣ ಸೃಷ್ಟಿಸಿತ್ತು.
ನಿರಂತರ 4 ಗಂಟೆಗಳ ಕಾಲ ಗುಡುಗು ಮಿಂಚು ಜನ ಜಾನುವಾರುಗಳಿಗೆ ಭಯ ಮೂಡಿಸಿದ ದೃಶ್ಯ ಗೋಚರಿಸಿತು.
ಕುಶಾಲನಗರದ ಬೈಚನಹಳ್ಳಿ ಬಳಿ ಯೋಗಾನಂದ ಬಡಾವಣೆ ಬಹುತೇಕ ನೀರಿನಿಂದ ಆವೃತಗೊಂಡು ಅಲ್ಲಿನ ಮಸೀದಿ ಒಳಭಾಗಕ್ಕೂ ನೀರು ಸೇರಿದೆ. ಕೊಪ್ಪ ಗೇಟ್ ಬಳಿ ಸ್ಮಶಾನ ಒಂದರ ತಡೆಗೋಡೆ ಕುಸಿದಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ಹೆದ್ದಾರಿ ಬಳಿ ನೀರಿನ ರಭಸಕ್ಕೆ ಕಾಂಪೌಂಡ್ ಕುಸಿದಿದ್ದು ಯಾವದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಸಂಪೂರ್ಣ ನೀರಿನಿಂದ ಅವೃತಗೊಂಡು ವ್ಯಾಪಾರಿಗಳು ಪರದಾಡುವಂತಾಯಿತು.
ಚರಂಡಿಗಳು ತುಂಬಿ ಹೆದ್ದಾರಿ ರಸ್ತೆ ಮೇಲೆ ನೀರು ಹರಿಯುವದರೊಂದಿಗೆ ವಾಹನ ಸಂಚಾರ ಕೂಡ ಸ್ಥಗಿತಗೊಳ್ಳುವಂತಾಯಿತು. ಗುಡುಗು ಸಿಡಿಲು ರಭಸಕ್ಕೆ ನಾಗರೀಕರು ರಾತ್ರಿ ವೇಳೆ ನಿದ್ದೆಗೆಡುವಂತಹ ಪರಿಸ್ಥಿತಿ ಒದಗಿತ್ತು. ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಕುಶಾಲನಗರ ವ್ಯಾಪ್ತಿಯಲ್ಲಿ ಕ್ಷೀಣವಾಗಿ ಹರಿಯುತ್ತಿದ್ದ ನದಿಯಲ್ಲಿ ನೀರಿನ ಹರಿವು ಏರಿಕೆಗೊಳ್ಳುವದರೊಂದಿಗೆ ಸಂಪೂರ್ಣ ಕೆಸರುಮಯವಾದ ದೃಶ್ಯ ಗೋಚರಿಸಿದೆ.