ಮಡಿಕೇರಿ, ಏ. 7: ಅನಾದಿ ಕಾಲದಿಂದಲೂ ದೇಶದಲ್ಲಿ ಗೋವನ್ನು ಗೋಮಾತೆಯೆಂದು ಪೂಜಿಸಿಕೊಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಆಗ್ರಹಿಸಿ ಸಿಎನ್‍ಸಿ ವತಿಯಿಂದ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥರು ಚುನಾವಣಾ ಭರವಸೆಯಂತೆ ಗೋ ಕಳ್ಳ ಸಾಗಣಿಕೆ, ಗೋ ಹತ್ಯೆ ಮತ್ತು ಗೋ ಮಾಂಸ ಮಾರಾಟಕ್ಕೆ ಸಂಬಂಧ ಜೀವಾವಧಿ ಶಿಕ್ಷೆಯನ್ನು ಜಾರಿಗೊಳಿಸುವ ಬದ್ಧತೆ ಮೆರೆದಿರುವದರೊಂದಿಗೆ ಅಕ್ರಮ ಗೋ ಕಸಾಯಿಖಾನೆಗಳಿಗೆ ಬೀಗ ಜಡಿದಿರುವದು ಸ್ವಾಗತಾರ್ಹ ಹೆಜ್ಜೆಯಾಗಿದೆ. ದೇಶದಲ್ಲಿ ಕೋಮು ಸೌಹಾರ್ಧತೆ ಕಾಪಾಡಲು ಗೋ ಹತ್ಯೆ ಮತ್ತು ಗೋ ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕೆಂದು ಸೂಫಿ ಸಂತ ಖ್ವಾಜ ಮೊನುದ್ದೀನ್ ಚಿಸ್ತಿ ಯವರ ಅಜ್ಮೀರ್ ದರ್ಗಾದ ಮುಖ್ಯಸ್ಥ ದಿವಾನ್ ಜೈನುಲ್ ಅಬಿದಿನ್ ಆಲಿಖಾನ್ ಸಲಹೆ ಮಾಡಿದ್ದಾರಲ್ಲದೇ ತಾವು ಮತ್ತು ತಮ್ಮ ಕುಟುಂಬಸ್ಥರು ಗೋಮಾಂಸ ಸೇವನೆ ತ್ಯಜಿಸುತ್ತಿರುವದಾಗಿ ಘೋಷಿಸಿದ್ದಾರೆ. ಮುಸ್ಲಿಂ ಬಾಂಧವರ್ಯಾರು ಗೋ ಮಾಂಸ ತಿನ್ನಬೇಡಿ ಕಸಾಯಿಖಾನೆ ಮತ್ತು ಗೋಮಾಂಸ ಮಾರಾಟದಿಂದ ಮುಸ್ಲಿಮರು ದೂರವಿರಬೇಕು ಮತ್ತು ಗೋಮಾಂಸ ತಿನ್ನುವದನ್ನು ನಿಲ್ಲಿಸುವ ಮೂಲಕ ದೇಶಕ್ಕೆ ಸಕರಾತ್ಮಕ ಮತ್ತು ಒಳ್ಳೆಯ ಸಂದೇಶವನ್ನು ಕಳುಹಿಸಬೇಕು ಎಂದು ಹೇಳಿ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಸರ್ಕಾರ ಘೋಷಿಸಬೇಕೆಂದು ಅವರು ಒತ್ತಾಯಿಸಿ ಗೋವು ಧಾರ್ಮಿಕ ನಂಬಿಕೆಯ ಸಂಕೇತವಾಗಿರುವದರಿಂದ ಗೋವನ್ನು ರಕ್ಷಿಸುವದು ಸರ್ಕಾರ ಮತ್ತು ಜನರ ಕರ್ತವ್ಯವೆಂದು ಅವರು ತಿಳಿಸಿದ್ದಾರೆ. ಅಲ್ಲದೇ ಆಲ್ ಇಂಡಿಯಾ “ಶಿಯಾ” ಪರ್ಸನಲ್ ಲಾ ಬೋರ್ಡ್ ದೇಶದ ಸಮಸ್ತ ಮುಸ್ಲಿಂ ಬಾಂಧವರು ಗೋ ಮಾಂಸ ತಿನ್ನುವದನ್ನು ನಿಷೇಧಿಸಬೇಕು ಮತ್ತು ಗೋ ಮಾಂಸ ಮಾರಾಟ, ಗೋ ಕಳ್ಳ ಸಾಗಾಣಿಕೆ ಮೇಲೆ ನಿರ್ಬಂಧ ಹೇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿರುವದು ಗಮನಾರ್ಹ ಬೆಳವಣಿಗೆಯಾಗಿದೆಯಲ್ಲದೇ ಇದರಿಂದಾಗಿ ಒಂದು ಜನಾಂಗವನ್ನು ತಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡುತ್ತಿರುವ ಪ್ರಗತಿಪರ ಬುದ್ಧಿಜೀವಿಗಳಿಗೆ ಕಪಾಳಮೋಕ್ಷ ಮಾಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಮನವಿ ಆಗ್ರಹಿಸಲಾಗಿದೆ.