ಮಡಿಕೇರಿ, ಏ. 7: ಜಾತಿ ದೃಢೀಕರಣ ಪತ್ರದಲ್ಲಿ ಕೊಡಗ ಬದಲಿಗೆ ಕೊಡವ ಎಂದು ನಮೂದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗದ ವರದಿ ಬಂದ ನಂತರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಕೊಡಗು ಜಿಲ್ಲೆಯ ಪ್ರಮುಖ ಜನಾಂಗವಾದ ಕೊಡವ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರ ಕೊಡುವಾಗ ಕೊಡಗ ಎಂದು ನೀಡಲಾಗುತ್ತಿದೆ. ಇದನ್ನು ವಿರೋಧಿಸಿ ಅಲ್ಲಿಯ ಕೊಡವ ಸಮಾಜ, ಸಂಘಟನೆಗಳು ಜಾತಿ ದೃಢೀಕರಣ ಪತ್ರದಲ್ಲಿ ಕೊಡಗ ಬದಲಿಗೆ ಕೊಡವ ಎಂದು ನಮೂದಿಸಲು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಜಾರಿಯಾಗಿಲ್ಲ. ಈ ಬಗ್ಗೆ ಗಮನ ಹರಿಸಿ ಜನಾಂಗದ ಬೇಡಿಕೆಯಂತೆ ಜಾತಿ ದೃಢೀಕರಣ ಪತ್ರದಲ್ಲಿ ಕೊಡಗ ಬದಲಿಗೆ ಕೊಡವ ಎಂದು ನಮೂದಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಬೋಪಯ್ಯ ಅವರು ನಿಯಮ-73ರಡಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಗಮನ ಸೆಳೆದಿದ್ದರು. ಇದಕ್ಕೆ ಸಚಿವರು ನೀಡಿರುವ ಉತ್ತರ ಇಂತಿದೆ:-
ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ:ಸಕಇ 225 ಬಿಸಿಎ 2000, ದಿನಾಂಕ :30.03.2002ರ ಆದೇಶದ ಪ್ರವರ್ಗ-3 ‘ಎ'ರಡಿ ಕೊಡಗರು ಜಾತಿಯು ಹಿಂದುಳಿದ ವರ್ಗಗಳ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತದೆ.
ಈ ಹಿಂದಿನ ಡಾ. ಸಿ.ಎಸ್. ದ್ವಾರಕನಾಥ್ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2010ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವಿಶೇಷ ವರದಿ ಸಲಹೆ ಸಂಖ್ಯೆ:01ರಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ ಬೆಂಗಳೂರು ಕೊಡವ ಸಮಾಜದ ಆಗಿನ ಕಾರ್ಯದರ್ಶಿ ಮಂಡೇಡ ರವಿ ಉತ್ತಪ್ಪ ಸಲ್ಲಿಸಿದ ಮನವಿಯಂತೆ ಸರ್ಕಾರಿ ಆದೇಶ ಸಂಖ್ಯೆ :ಸಕಇ 225 ಬಿಸಿಎ 2000, ದಿನಾಂಕ : 30.03.2002ರ ಪ್ರವರ್ಗ-3 ‘ಎ' ಕ್ರಮ ಸಂಖ್ಯೆ:2ರಲ್ಲಿ ‘ಕೊಡಗರು' ಎಂಬ ಪದವನ್ನು ತೆಗೆದುಹಾಕಿ ‘ಕೊಡವ' ಮತ್ತು ‘ಕೊಡವರು' ಎಂದು ಸೇರಿಸಬಹುದಾಗಿದೆ. ಅಂತೆಯೇ ಇಂಗ್ಲೀಷ್ ಪಟ್ಟಿಯಲ್ಲಿ ಸದರಿ ಕ್ರಮ ಸಂಖ್ಯೆಯಲ್ಲಿ ‘ಏoಜಚಿgಚಿಡಿu' ಎನ್ನುವದನ್ನು ತೆಗೆದು ‘ಅoಜಚಿvಚಿ’, ‘ಅoಜಚಿvಚಿಡಿu’, ‘ಏoಜಚಿvಚಿ’ ಹಾಗೂ ‘ಏoಜಚಿvಚಿಡಿu’ ಎಂದು ಸೇರಿಸಬೇಕೆಂದು ಸಲಹೆ ನೀಡಿರುತ್ತದೆ. ಸದರಿ ವರದಿಯು ಸರ್ಕಾರದ ಪರಿಶೀಲನೆಯಲ್ಲಿದೆ.
ಪ್ರಸ್ತುತ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2015-16ನೇ ಸಾಲಿನಲ್ಲಿ ಕೈಗೊಂಡಿದ್ದು, ಸದರಿ ಸಮೀಕ್ಷೆಯಡಿ ಕೊಡಗರು / ಕೊಡವರು / ಕೊಡವ ಎಂಬ ಜಾತಿಗೆ ಪ್ರತ್ಯೇಕ ಸಂಕೇತ ಸಂಖ್ಯೆಯನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಮೀಕ್ಷೆಯ ವರದಿ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ಆಯೋಗವು ಸಧ್ಯದಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಆಯೋಗದ ವರದಿ ಬಂದ ನಂತರ ಈ ಬಗ್ಗೆ ಪರಿಶೀಲಿಸಲಾಗುವದು ಎಂದು ತಿಳಿಸಿದ್ದಾರೆ.