ಮಡಿಕೇರಿ, ಏ. 6: ಕುಡಿಯುವ ನೀರಿನ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯ ಸಿ.ಪಿ. ಪುಟ್ಟುರಾಜು ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರ ತಲೆದೋರಿದೆ. ಗ್ರಾ.ಪಂ. ಪಿಡಿಓಗಳಿಗೆ ದೂರವಾಣಿ ಕರೆ ಮಾಡಿದರೆ ರಿಸಿವ್ ಮಾಡುತ್ತಿಲ್ಲ ಜಿಲ್ಲೆಯಲ್ಲಿ ಎಷ್ಟು ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 44 ತೊಟ್ಟಿಗಳನ್ನು ನಿರ್ಮಿಸಲಾಗಿದೆ ಎಂದು ಸಂಬಂಧಿಸಿದ ಇಲಾಖಾಧಿಕಾರಿ ಮಾಹಿತಿ ನೀಡಿದರು. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ ತನ್ನ ಕ್ಷೇತ್ರದಲ್ಲಿ ಒಂದು ವರ್ಷದಿಂದ ಟೆಂಡರ್ ಆಗಿದ್ದರೂ ಬೋರ್‍ವೆಲ್ ತೆರೆಯಲು ಸಾಧ್ಯವಾಗಿಲ್ಲ. ಬೋರ್‍ವೆಲ್ ತೆಗೆಯಲು ಸಾಧ್ಯವಾಗದಿದ್ದಲ್ಲಿ ಟೆಂಡರ್‍ನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

ತಿತಿಮತಿ ಆಶ್ರಮ ಶಾಲೆಯಲ್ಲಿ ನೀರಿನ ಸಮಸ್ಯೆಯಿದೆ ಎಂದು ಸದಸ್ಯ ಸಿ.ಕೆ. ಬೋಪಣ್ಣ ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದಾರೆ. ತನ್ನ ಕ್ಷೇತ್ರದಲ್ಲಿ ಪ್ರವೇಶ ಮಾಡಿ ಹೇಳಿಕೆ ನೀಡಲು ಅವರ್ಯಾರು ಎಂದು ತಿತಿಮತಿ ಸದಸ್ಯೆ ಕ್ಷೇತ್ರದ ಪಿ.ಆರ್. ಪಂಕಜ ಆಕ್ರೋಶ ವ್ಯಕ್ತಪಡಿಸಿದರು.

ಸಮಜಾಯಿಷಿಕೆ ನೀಡಲು ಸಿ.ಕೆ. ಬೋಪಣ್ಣ ಎದ್ದು ನಿಂತಾಗ ನೀವು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ಗೋಣಿಕೊಪ್ಪಲು ಪಟ್ಟಣ ಕಸದ ರಾಶಿಯಿಂದ ತುಂಬಿದೆ. ಅದನ್ನು ಸರಿಯಾಗಿ ನಿರ್ವಹಿಸಿ ಎಂದು ಆಕ್ರೋಶದಿಂದ ಹೇಳಿದರು.

ಈ ಸಂದರ್ಭ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಸುಬ್ರಮಣಿ ಸಮಜಾಯಿಷಿಕೆ ನೀಡಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಹಾಗೂ ಬೋಪಣ್ಣ ಅವರೊಂದಿಗೆ ಮೈಸೂರಿಗೆ ತೆರಳಿದವರು ಹಿಂದಿರುಗುವಾಗ ತಿತಿಮತಿ ಆಶ್ರಮ ಶಾಲೆಗೆ ಭೇಟಿ ನೀಡಿದ್ದೇವೆ. ಆಕಸ್ಮಿಕ ಭೇಟಿ ಅಷ್ಟೇ. ಈ ಸಂದರ್ಭ 13 ವಿದ್ಯಾರ್ಥಿಗಳು ಜ್ವರದಿಂದ ಬಳಲುತ್ತಿದ್ದರು. ವೈದ್ಯರನ್ನು ಕರೆಯಿಸಿ ಔಷಧಿ ಕೊಡಿಸಲಾಗಿತ್ತು. ನೀರನ್ನು ಬದಲಾಯಿಸಲು ವೈದ್ಯರು ಸಲಹೆ ಮಾಡಿದ್ದಾರೆ ಎಂದು ಹೇಳಿದರು.

ತಿತಿಮತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯವಾಗುತ್ತಿದೆ. ವಾಹನಗಳಲ್ಲಿ

(ಮೊದಲ ಪುಟದಿಂದ) ತೆರಳಲು ವಾಹನ ಭತ್ಯೆ ಅಥವಾ ವಾಹನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಡುವಂತೆ ಸದಸ್ಯೆ ಪಿ.ಆರ್. ಪಂಕಜ ಆಗ್ರಹಿಸಿದರು. ಈ ಸಂದರ್ಭ ಇಲಾಖೆಯ ಅಧಿಕಾರಿ ಬಸವರಾಜು ಅವರು ಈ ವ್ಯವಸ್ಥೆ ಮಾಡಲು ಇಲಾಖೆಯಲ್ಲಿ ಅವಕಾಶವಿಲ್ಲ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ ಮಾತನಾಡಿ, ರುಬೇಲ್ಲಾ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಶೇ. 95 ಮತ್ತು ಇತ್ತೀಚೆಗೆ ನಡೆದ ಫಲ್ಸ್ ಪೋಲಿಯೋ ಅಭಿಯಾನದಲ್ಲಿ ಶೇ. 104 ರಷ್ಟು ಸಾಧನೆಯಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಮೂಕೊಂಡ ವಿಜು ಸುಬ್ರಮಣಿ, ಶ್ರೀನಿವಾಸ್, ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.