ಸಿದ್ದಾಪುರ, ಏ. 6: ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಬೇಸತ್ತಿದ್ದ ದೇಶದ ಜನತೆ, ಬಿ.ಜೆ.ಪಿ. ಪಕ್ಷಕ್ಕೆ ಬೆಂಬಲ ನೀಡಿ ಇದೀಗ ದೇಶದಲ್ಲೇ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ ಎಂದು ವೀರಾಜಪೇಟೆ ಫೆಡರೇಷನ್ ಅಧ್ಯಕ್ಷ ಐನಂಡ ಜಪ್ಪು ಅಚ್ಚಪ್ಪ ತಿಳಿಸಿದರು.

ಅಮ್ಮತ್ತಿ-ಕಾರ್ಮಾಡು-ಕಾವಾಡಿ ಗ್ರಾಮದ ಮಾಚಿಮಂಡ ವಸಂತ್ ಅವರ ಮನೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಬಿ.ಜೆ.ಪಿ. ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1977 ರಲ್ಲಿ ಪ್ರಾರಂಭಗೊಂಡ ಬಿ.ಜೆ.ಪಿ. ಪಕ್ಷ ಉತ್ತರ ಭಾರತದಲ್ಲಿ ಮೊದಲ ಬಾರಿಗೆ ಬೆಳೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಿತ್ತು ಎಂದರು. 55 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ದೇಶವನ್ನು ಅಧೋಗತಿಗೆ ತಂದಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಎರಡು ಲೋಕಸಭಾ ಸ್ಥಾನದ ಮೂಲಕ ಲೋಕಸಭೆಗೆ ಆಯ್ಕೆ ಆದ ಬಿ.ಜೆ.ಪಿ. ಪಕ್ಷವು ಇಂದು ಹೆಮ್ಮರವಾಗಿ ಬೆಳೆದು ದೇಶದಲ್ಲಿ ಅತ್ಯಧಿಕ ಸ್ಥಾನಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೋದಿ ನೇತೃತ್ವದಲ್ಲಿ ಉತ್ತಮವಾದ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದರು.

ಪಕ್ಷದ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಗೋಣಿಕೊಪ್ಪಲು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಚಿಮಂಡ ಸುವಿನ್ ಗಣಪತಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಕಾರ್ಮಾಡು-ಕಾವಾಡಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಿಮಂಡ ವಸಂತ್, ಕಾರ್ಯದರ್ಶಿ ಅಜ್ಜು ಅಯ್ಯಪ್ಪ, ಕುಟ್ಟಂಡ ತಿಮ್ಮಯ್ಯ (ಚಿಮ್ಮಣ್ಣ), ಇನ್ನಿತರ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಇದೇ ಸಂದರ್ಭ ಬಿ.ಜೆ.ಪಿ. ಪಕ್ಷದ ಸ್ಥಾಪಕ ಮುಖಂಡರು ಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಗೌರವಿಸಲಾಯಿತು.