ಸೋಮವಾರಪೇಟೆ, ಏ. 6: ಹಿಂದೂ ಧಾರ್ಮಿಕ ಶ್ರದ್ಧೆಯ ಅವಹೇಳನಕ್ಕೆ ಜಾಗೃತ ಹಿಂದೂ ಸಮಾಜ ಎಚ್ಚೆತ್ತುಕೊಳ್ಳ ಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಮುಖ್ಯಸ್ಥ ಜಗದೀಶ್ ಕಾರಂತ್ ಕರೆ ನೀಡಿದರು.

ಇಲ್ಲಿನ ಹಿಂದೂ ಜಾಗರಣಾ ವೇದಿಕೆ ಹಾಗೂ ಆಂಜನೇಯ ದೇವಾಲಯ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ರಾಮನವಮಿ-ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ ಹಾಗೂ ದೇವ ನಂಬಿಕೆ ಭಾರತದ ಅಖಂಡತೆಯನ್ನು ಕಾಪಾಡಿಕೊಂಡು ಬಂದಿದೆ. ಭಾರತ ಬದುಕಿರುವದಕ್ಕೆ ಆಧಾರ ಸ್ತಂಭವೇ ಹಿಂದೂ ಧರ್ಮ. ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶದಲ್ಲಿ ಗೋಹತ್ಯೆ ನಿರಾತಂಕವಾಗಿದೆ. ಇದನ್ನು ತಡೆಗಟ್ಟುವ ಕಾರ್ಯ ಆಗಬೇಕಿದೆ. ಧರ್ಮ ರಕ್ಷಣೆಗೆ ಜಾತಿ, ಮತ, ಪಂಥ, ರಾಜಕೀಯ ಮರೆತು ಎಲ್ಲರೂ ಒಂದಾಗುವ ಸಮಯ ಬಂದಿದೆ ಎಂದರು.

ಭಾರತ ದೇಶ ಕೇವಲ ಕಲ್ಲು-ಮಣ್ಣಿನ ಗುಡ್ಡೆಯಲ್ಲ; ಇದು ದೇವ ಭೂಮಿ, ತಪೋಭೂಮಿ, ಹಿಂದುತ್ವದ ಅಸ್ಮಿತೆಯೊಂದಿಗೆ ನಂಟಿರುವ ಪುಣ್ಯಭೂಮಿ. ಸಂಸ್ಕøತಿಯ ತವರು ನೆಲದಲ್ಲೇ ಧಾರ್ಮಿಕ ವಿಚಾರಗಳ ಮೇಲೆ ಧಾಳಿಯಾಗುತ್ತಿದೆ. ಧರ್ಮದ ರಕ್ಷಣೆಗೆ ಮುಂದಾಗದಿದ್ದರೆ ಮುಂದಿನ ತಲೆಮಾರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಾಮನಾಮ ಜಪ ಆಗುತ್ತಿದೆ. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ದೇಶಾಭಿಮಾನ, ಧರ್ಮಾಭಿಮಾನ ಮೂಡಿಸುವ ಪಠ್ಯಗಳನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸಬೇಕಿದೆ ಎಂದು ಜಗದೀಶ್ ಕಾರಂತ್ ಅಭಿಪ್ರಾಯಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಆಂಜನೇಯ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸೀತಾರಾಂ, ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ಸುಭಾಶ್ ತಿಮ್ಮಯ್ಯ ಅವರುಗಳು ಉಪಸ್ಥಿತರಿದ್ದರು.