ವೀರಾಜಪೇಟೆ, ಏ.6 : ಬಿಟ್ಟಂಗಾಲದಿಂದ ತಾ. 3ರಂದು ಆಲ್ಟೋ ಕಾರು ಸಮೇತವಾಗಿ ನಾಪತ್ತೆಯಾಗಿದ್ದ ಪ್ರಥಮ ಪಿ.ಯು. ತರಗತಿ ವಿದ್ಯಾರ್ಥಿ ಇಂದು ಅಪರಾಹ್ನ 3 ಗಂಟೆಗೆ ಬೆಂಗಳೂರಿನ ಮಲ್ಲಸಂದ್ರ ಬಳಿಯಲ್ಲಿ ಪತ್ತೆಯಾಗಿದ್ದಾಳೆ.ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಬೇಸತ್ತು ಮನೆಯಿಂದ ಹೊರಟು ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದುದಾಗಿ ಪತ್ತೆ ಹಚ್ಚಿದ ತಂಡಕ್ಕೆ ಹೇಳಿಕೆ ನೀಡಿದ್ದಾಳೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾದ ನಂತರ ಪೊಲೀಸರು ಮೈಸೂರು ಮಂಡ್ಯ ಬೆಂಗಳೂರು ಹಾಗೂ ತುಮಕೂರಿನ ವಿವಿಧೆಡೆಗಳಲ್ಲಿ ಹುಡುಕಾಡಿದ್ದಾರೆ. ಆದರೆ ಪೊಲೀಸರ ಹುಡುಕಾಟದ ಒಂದು ತಂಡದಲ್ಲಿ ಆಕೆಯ ಕುಟುಂಬದವರಿದ್ದು, ಸಿ.ಸಿ.ಕ್ಯಾಮರಾ ಆಧರಿಸಿ ಹುಡುಕಾಟ ಮುಂದುವರೆ ಸಿದ್ದರು.

ಇಂದು ಈಕೆ ಕಾರು ಸಹಿತ ಬೆಂಗಳೂರಿನ ಚಿಕ್ಕಸಂದ್ರದ ಬಾಬಣ್ಣ ಬಡಾವಣೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ತಾ. 3ರಂದು ಬೆಳಿಗ್ಗೆ ಕಾರಿನಲ್ಲಿ ತೆರಳಿದ್ದ ಈಕೆ ಆ ದಿನವಿಡೀ ಒಬ್ಬಳೆ ಕಾರಿನಲ್ಲೇ ಸುತ್ತಾಡಿ ರಾತ್ರಿಯನ್ನೂ ಕಳೆದಿದ್ದಾಳೆ. ಪೊಲೀಸ್ ಮೂಲದ ಪ್ರಕಾರ ಶಿರಾ ತನಕ ತೆರಳಿ ಈಕೆ ಮತ್ತೆ ಬೆಂಗಳೂರಿಗೆ ತೆರಳಿದ್ದಾಳೆ. ಅಲ್ಲಿ ವ್ಯಕ್ತಿಯೋರ್ವರ ಬಳಿ ತೆರಳಿ ತಾನು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದು, ಇದೀಗ ಕೆಲಸ ಬಿಟ್ಟು ಬಂದಿದ್ದೇನೆ. ತನ್ನ ದಾಖಲೆ ಕಳೆದು ಹೋಗಿದ್ದು,

(ಮೊದಲ ಪುಟದಿಂದ) ನನಗೆ ಒಂದು ಕೆಲಸ ಹಾಗೂ ಆಶ್ರಯ ಬೇಕೆಂದು ಕೇಳಿಕೊಂಡಿದ್ದಾಳೆ. ಈ ವ್ಯಕ್ತಿ ಈಕೆಯನ್ನು ತನ್ನ ಪರಿಚಯಸ್ಥರೊಬ್ಬರ ಬಳಿ ಕಳುಹಿಸಿದ್ದು, ಅವರು ಮಾನವೀಯ ದೃಷ್ಟಿಯಲ್ಲಿ ಆಶ್ರಯ ನೀಡಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಇದೀಗ ಈಕೆ ಪತ್ತೆಯಾಗುವದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ. ಈಕೆಯನ್ನು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಾದ ಬೆಳ್ಯಪ್ಪ, ಸುಬ್ರಮಣಿ ಜೋಯಪ್ಪ ಪತ್ತೆ ಹಚ್ಚಿದ್ದಾರೆ.