ಕೂಡಿಗೆ, ಏ. 6: ಕೂಡಿಗೆ ಗ್ರಾಮ ಪಂಚಾಯಿತಿಯಿಂದ ವಸತಿ ಹೀನರಿಗೆ ವ್ಯವಸ್ಥೆಗಾಗಿ ಬ್ಯಾಡಗೊಟ್ಟ ಗ್ರಾಮದ ಸರ್ವೆ ನಂ. 10,11,12 ಗಳಲ್ಲಿ ಸುಮಾರು 9 ಏಕರೆ ಪೈಸಾರಿ ಪ್ರದೇಶವನ್ನು ಮಂಜೂರು ಮಾಡಿಕೊಡಬೇಕೆಂದು ಸೋಮವಾರಪೇಟೆ ತಹಶೀಲ್ದಾರರಿಗೂ, ಮಡಿಕೇರಿ ಉಪ ವಿಭಾಗದ ವಿಭಾಗಾಧಿಕಾರಿಗಳಿಗೂ ಬೇಡಿಕೆಯನ್ನು ಸಲ್ಲಿಸಲಾಗಿದೆ. ಈ ಬೇಡಿಕೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಆದರೆ ಇದೀಗ ಮೇಲ್ಮಟ್ಟದ ಅಧಿಕಾರಿಗಳು ಬೇರೆ ಇಲಾಖೆಯ ಮಂದಿಗೆ ಈ ಜಾಗ ನೀಡಲು ಮುಂದಾಗಿರುವದಾಗಿ ಆರೋಪಿಸಿರುವ ಕೂಡಿಗೆ ಮತ್ತು ಕೂಡುಮಂಗಳೂರು ವ್ಯಾಪ್ತಿಯ ನಿವೇಶನ ರಹಿತರು ಮೊದಲು ತಮಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ಖಾಸಗಿ ಭೂಮಾಲೀಕರ ಸಾಲು ಮನೆಗಳಲ್ಲಿ ವಾಸಿಸುವ ಗಿರಿಜನರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಸರ್ಕಾರಿ ಜಮೀನನ್ನು ಖಾಯ್ದಿರಿಸಬೇಕಿದೆ. ಅದರಂತೆ ಸೋಮವಾರಪೇಟೆ ತಹಶೀಲ್ದಾರ್ ಅವರು ಸಂಬಂಧಿಸಿದ ಕಂದಾಯ ಪರಿವೀಕ್ಷಕರಿಂದ ವರದಿ ಪಡೆದು ಬ್ಯಾಡಗೊಟ್ಟ ಗ್ರಾಮದಲ್ಲಿ 3 ಏಕರೆ, 1.20 ಏಕರೆ, 4.50 ಏಕರೆ ಜಮೀನನ್ನು ಗುರುತಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಮೀನು ವಸತಿ ಯೋಜನೆಗೆ ಸೂಕ್ತವಾಗಿರುವದರಿಂದ ಕರ್ನಾಟಕ ಭೂ ಕಂದಾಯ ಖಾಯಿದೆ 1964ರ ಕಾಲಂ 71ರ ಅಡಿ ಗಿರಿಜನರ ವಸತಿ ಸೌಲಭ್ಯಕ್ಕಾಗಿ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಧಿಕಾರಿಗೆ ಸೋಮವಾರಪೇಟೆ ತಹಶೀಲ್ದಾರರ ಪತ್ರ ರವಾನಿಸಿದ್ದಾರೆ.

ಪತ್ರ ಸಂಖ್ಯೆ 587/2016-17ರ ದಿನಾಂಕ 24.3.2017 ರಲ್ಲಿ ಉಪ ವಿಭಾಗಾಧಿಕಾರಿ ಮಡಿಕೇರಿ ಉಪವಿಭಾಗ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕೂಡ ರವಾನೆಯಾಗಿದೆ. ಪ್ರಸ್ತಾಪಿತ ಜಾಗ ಬ್ಯಾಡಗೊಟ್ಟ-ಕುಶಾಲನಗರ ಸಂಪರ್ಕ ರಸ್ತೆಯಿಂದ ಕೇವಲ 500 ಮೀಟರ್ ಅಂತರದಲ್ಲಿದ್ದು ಸಮತಟ್ಟಾದ ಖಾಲಿ ಜಾಗವಾಗಿದೆ. ವಸತಿ ಯೋಜನೆಗೆ ಸೂಕ್ತವಾದ ಸ್ಥಳವೆಂದು ತಹಶೀಲ್ದಾರರು ಈ ಹಿಂದೆಯೇ ವರದಿ ನೀಡಿದ್ದಾರೆ.

ಸಂಬಂಧಿಸಿದವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿರುವ ಜಿ.ಪಂ. ಮಾಜಿ ಅಧ್ಯಕ್ಷ ರಾಜಾರಾವ್, ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಕೆ.ವೈ. ರವಿ ಹಾಗೂ ಹೆಚ್.ಎಸ್. ರವಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ.