ಗೋಣಿಕೊಪ್ಪಲು, ಏ. 7: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಸರ್ಕಾರವನ್ನು ಒತ್ತಾಯಿಸಲು ತಾ. 10 ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಗೋಪಾಲ್ ತಿಮ್ಮಯ್ಯ ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲೂಕು ರಚನಾ ಸಮಿತಿ, ನಾಗರಿಕ ವೇದಿಕೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಸಹಯೋಗದಲ್ಲಿ ಸಾರ್ವಜನಿಕ ಸಭೆ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 11 ಗಂಟೆಗೆ 20 ಗ್ರಾ.ಪಂ., ತಾ.ಪಂ., ಜಿ.ಪಂ. ಗಳ ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆ, ಮಾಜಿ ಹಾಗೂ ಹಾಲಿ ಶಾಸಕರು ಹಾಗೂ ಸಾರ್ವಜನಿಕರನ್ನು ಒಟ್ಟುಗೂಡಿಸಿ ಸಭೆಯ ಮೂಲಕ ಸಾಧಕ ಬಾಧಕಗಳ ಚರ್ಚೆ ನಡೆಸಲಾಗುವದು ಎಂದರು.
ಜಿಲ್ಲೆಯ ಗಡಿಭಾಗವಾದ ಬಿರುನಾಣಿ, ಪರಕಟಗೇರಿ, ಕುಟ್ಟ, ನಾಲ್ಕೇರಿ, ಬಾಳೆಲೆ, ಕಾರ್ಮಾಡು ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿನ ಜನರ ಹಿತದೃಷ್ಟಿಯಿಂದ ಪೊನ್ನಂಪೇಟೆ ತಾಲೂಕು ರಚನೆ ಅನಿವಾರ್ಯ ಎಂದು ಅವರು ಹೇಳಿದರು.
ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ ಮತ್ತು ಹುದಿಕೇರಿ ನಾಡುಗಳಲ್ಲಿ ಬರುವ 48 ಗ್ರಾಮಗಳು ಹಾಗೂ 20 ಗ್ರಾಮ ಪಂಚಾಯ್ತಿಗಳನ್ನು ಒಟ್ಟು ಸೇರಿಸಿ ಪೊನ್ನಂಪೇಟೆ ಕೇಂದ್ರ ಸ್ಥಾನವಾಗಿ ತಾಲೂಕು ರಚನೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗುವದು ಎಂದರು.
ಜಿ. ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಸರ್ಕಾರ ತಾಲೂಕು ರಚನೆಗೆ ಬೇಕಿರುವ ಎಲ್ಲಾ ಮಾನದಂಡಗಳು ಪೊನ್ನಂಪೇಟೆಯಲ್ಲಿದೆ. ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಕಚೇರಿ ಹೊರತು ಪಡಿಸಿ ಎಲ್ಲಾ ಇಲಾಖೆಗಳ ಕಚೇರಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಕಚೇರಿ, ನ್ಯಾಯಾಲಯ, ಉಪನೋಂದಣಿ ಕೇಂದ್ರ, ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಪೊನ್ನಂಪೇಟೆಯಲ್ಲಿರುವದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಾಲೂಕು ರಚನೆಗೆ ಮುಂದಾಗಬೇಕು ಎಂದರು.
ಕಂದಾಯ ಇಲಾಖೆ ವಿರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ದೂರದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಪೊನ್ನಂಪೇಟೆಯನ್ನು ತಾಲೂಕು ಎಂದು ಘೋಷಿಸಿ ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತಕ್ಕೆ ಮುಂದಾಗಬೇಕು ಎಂದರು.
ಗೋಷ್ಠಿಯಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ, ಉಪಾಧ್ಯಕ್ಷ ಸಿ.ಕೆ. ಸೋಮಯ್ಯ, ಪದಾಧಿಕಾರಿಗಳಾದ ಕೆ.ಗಣಪತಿ ಹಾಗೂ ಆಲೀರ ಎರ್ಮು ಇದ್ದರು.