ಕುಶಾಲನಗರ, ಏ. 7: ನವೀಕೃತಗೊಂಡ ಕುಶಾಲನಗರದ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರ ಇದೀಗ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಂಡಿದೆ. 25 ವರ್ಷಗಳ ಇತಿಹಾಸ ಹೊಂದಿರುವ ಈ ಪ್ರವಾಸಿ ಕೇಂದ್ರವನ್ನು ಅರಣ್ಯ ಇಲಾಖೆ ರೂ 1 ಕೋಟಿ 12 ಲಕ್ಷದ 50 ಸಾವಿರ ವೆಚ್ಚದಲ್ಲಿ ನವೀಕರಿಸುತ್ತಿದ್ದು ಕೆಲವು ದಿನಗಳಿಂದ ಕಾರ್ಯನಿಮಿತ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ನಿಸರ್ಗಧಾಮಕ್ಕೆ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗುತ್ತಿದ್ದು ಎರಡೂ ಕಡೆ ಆವರಣ ಗೋಡೆ ನಿರ್ಮಿಸಲಾಗುತ್ತಿದೆ. ನದಿ ದಾಟಲು ನಿರ್ಮಿಸಿರುವ ತೂಗುಸೇತುವೆಯ ನಿರ್ವಹಣೆ ಕಾಮಗಾರಿ ಮಾತ್ರ ಪೂರ್ಣ ಗೊಂಡಿದ್ದು ಇನ್ನುಳಿದಂತೆ ಒಳಭಾಗದಲ್ಲಿ ಹಲವು ಕಾಮಗಾರಿಗಳು ಮುಂದುವರೆದಿದೆ. ಕೊಡಗಿನ ಸಂಸ್ಕøತಿ ಬಿಂಬಿಸುವ ಸ್ತಬ್ಧ ಚಿತ್ರಗಳಾದ ಉಮ್ಮತ್ತಾಟ್, ಕೋಲಾಟ್ ಮತ್ತಿತರ ದೃಶ್ಯಗಳನ್ನು ಒಳಭಾಗದಲ್ಲಿ ಅಳವಡಿಸಲಾಗಿದೆ. ಹಾವೇರಿಯಿಂದ ಕಲಾವಿದರು ಈ ಸ್ತಬ್ಧಚಿತ್ರಗಳನ್ನು ಆಕರ್ಷಕವಾಗಿ ನಿರ್ಮಿಸಿರುವದಾಗಿ ಕೊಡಗು ವೃತ್ತದ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒಳಭಾಗವನ್ನು ಸಂಪೂರ್ಣ ಹಸಿರೀಕರಣಗೊಳಿಸುವ ಯೋಜನೆ ಹಿನ್ನಲೆಯಲ್ಲಿ ಶಾಶ್ವತವಾದ ನೀರಿನ ಟ್ಯಾಂಕ್ ಒಂದನ್ನು ನಿರ್ಮಿಸಲಾಗಿದ್ದು ತುಂತುರು ನೀರಾವರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜಿಂಕೆವನಕ್ಕೆ ತೆರಳುವ ರಸ್ತೆಯನ್ನು ಅಲಂಕಾರ ಮಾಡಲಾಗಿದ್ದು ಒಳಭಾಗದಲ್ಲಿ ಕ್ರಿಯಾತ್ಮಕ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
ಪ್ರವಾಸಿಗರಿಗೆ ವಿಶ್ರಾಂತಿ ತೆಗೆದುಕೊಳ್ಳುವ ಆಸನಗಳನ್ನು ನಿರ್ಮಿಸಲಾಗಿದೆ. ನಿಸರ್ಗಧಾಮದ ಒಳಭಾಗದಲ್ಲಿರುವ ಸಂಪೂರ್ಣ ತ್ಯಾಜ್ಯಗಳನ್ನು ತೆರವುಗೊಳಿಸ ಲಾಗುತ್ತಿದ್ದು ಪ್ರವಾಸಿಗರಿಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಶಕ್ತಿಯೊಂದಿಗೆ ಮಾಹಿತಿ ನೀಡಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಕಾವೇರಿ ನಿಸರ್ಗಧಾಮದಲ್ಲಿ 11 ಕಾಟೇಜ್ಗಳಿದ್ದು ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನವೀಕರಿಸಲಾಗುತ್ತಿದೆ. ಭೋಜನಾಲಯ ಸಭಾಂಗಣವನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದಿದ್ದಾರೆ.
ಓರ್ವ ಉಪ ಅರಣ್ಯ ವಲಯಾಧಿಕಾರಿ, ಒಬ್ಬ ಅರಣ್ಯ ರಕ್ಷಕ, ವೀಕ್ಷಕ ಸೇರಿದಂತೆ 10 ದಿನಗೂಲಿ ನೌಕರರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಳಭಾಗದಲ್ಲಿ ಕೆಲವು ಖಾಸಗೀ ವ್ಯಕ್ತಿಗಳು ನಿಯಮಬಾಹಿರವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಿನ್ನಲೆಯಲ್ಲಿ ಅವರುಗಳನ್ನು ತೆರವುಗೊಳಿಸ ಲಾಗುತ್ತಿದೆ. ಟೆಂಡರ್ ಮೂಲಕ ನಿಯಮಾನುಸಾರ ಅಂಗಡಿ ಮಳಿಗೆ ಗಳನ್ನು ನೀಡಲು ಕ್ರಮಕೈಗೊಳ್ಳ ಲಾಗುವದು ಎಂದು ಅರಣ್ಯ ವಲಯಾಧಿಕಾರಿ ನೆಹರು ಮಾಹಿತಿ ನೀಡಿದ್ದಾರೆ.
ನಿಸರ್ಗಧಾಮದ ಒಳಭಾಗದಲ್ಲಿ 22 ಜಿಂಕೆಗಳಿದ್ದು ಪ್ರವಾಸಿಗರ ಆಕರ್ಷಣೆಗೆ ಒಳಗಾಗುತ್ತಿವೆ. ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಪ್ರಸಕ್ತ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ. ತೂಗುಸೇತುವೆಯ ನಿರ್ಮಾಣಗಾರ ಗಿರೀಶ್ ಭಾರದ್ವಾಜ್ ತಂಡ ಸೇತುವೆಯ ಸಂಪೂರ್ಣ ನಿರ್ವಹಣೆ ಕಾರ್ಯ ನಡೆಸಿದ್ದು ಇದೀಗ ಪ್ರವಾಸಿಗರಿಗೆ ಮುಕ್ತವಾಗಿದೆ.