ಮಡಿಕೇರಿ, ಏ. 6: ಇಲ್ಲಿನ ಚಾಮುಂಡೇಶ್ವರಿ ನಗರದ ವ್ಯಕ್ತಿಯೊಬ್ಬರನ್ನು ಸುಳ್ಯದಿಂದ ಅಪಹರಿಸಿ ತಂದು ಮಡಿಕೇರಿಯ ಸ್ಟೋನ್ ಹಿಲ್ ವ್ಯಾಪ್ತಿಯ ಕಾಡಿನೊಳಗೆ ಭಯಾನಕವಾಗಿ ಹತ್ಯೆಗೈದು, ಹೆಣವನ್ನು ಕಾಡಿನೊಳಗೆ ಹೂತು ಹಾಕಿರುವ ಸಿನಿಮೀಯ ಹಾಗೂ ಅಮಾನವೀಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸುಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿ ಕೊಂಡಿರುವದಾಗಿ ಹೇಳಲಾಗುತ್ತಿದೆ. ಚಾಮುಂಡೇಶ್ವರಿ ನಗರದ ನಿವಾಸಿ ಕುಮಾರ್ ಎಂಬವರು ಕಳೆದ ಫೆ. 20ರಂದು ಹಟ್ಟಿಹೊಳೆ ಬಳಿ ತಮ್ಮ ವಾಹನದಲ್ಲಿ ತೆರಳುತ್ತಿದ್ದಾಗ, ಅವಘಡ ಸಂಭವಿಸಿ, ಕಾಲುಮುರಿದುಕೊಂಡು ಸುಳ್ಯದ ಕೆವಿಜಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರನ್ನು ಮಗ ಕೆ. ರವಿ (35) ಎಂಬವರು ನೋಡಿಕೊಂಡಿದ್ದರು. ಕಳೆದ

ಮಾ. 31ರಂದು

(ಮೊದಲ ಪುಟದಿಂದ) ಸಂಜೆ 4 ಗಂಟೆ ಸುಮಾರಿಗೆ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ರವಿ ತಮ್ಮ ತಂದೆಗೆ ಔಷಧಿ ತರಲೆಂದು ಅಂಗಡಿಗೆ ಬಂದಿದ್ದು, ಆಸ್ಪತ್ರೆಗೆ ವಾಪಸಾಗಲಿಲ್ಲವೆಂದು ಗೊತ್ತಾಗಿದೆ. ಈ ಬಗ್ಗೆ ರವಿಯ ಪತ್ನಿ ಜಲಜಾಕ್ಷಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಮೇರೆಗೆ ತನಿಖೆ ಕೈಗೊಂಡ ಸುಳ್ಯ ಪೊಲೀಸರು, ಆಸ್ಪತ್ರೆ ಆವರಣದ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಈ ವೇಳೆ ನಾಲ್ವರು ವ್ಯಕ್ತಿಗಳು ಕಾರೊಂದರಲ್ಲಿ ಬಂದು ರವಿಯೊಂದಿಗೆ ಕಲಹ ನಡೆಸಿದ್ದಲ್ಲದೆ, ಬಲವಂತವಾಗಿ ವಾಹನದೊಳಗೆ ಎಳೆದುಕೊಂಡು ತೆರಳಿದ್ದ ಸುಳಿವು ಪೊಲೀಸರಿಗೆ ಲಭಿಸಿದೆ. ಈ ಸಂಬಂಧ ದುಷ್ಕøತ್ಯದ ಜಾಡು ಬೆನ್ನು ಹತ್ತಿದ ಪೊಲೀಸರಿಗೆ ರವಿ ಅಪಹರಣಕ್ಕೊಳಗಾದ ವಾಹನ ಮಡಿಕೇರಿಗೆ ಸಂಬಂಧಿಸಿದ್ದೆಂದು ಮಾಹಿತಿ ಲಭಿಸಿದೆ. ಆ ಮೇರೆಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಅವರು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರಿಗೆ ವಿಷಯ ತಿಳಿಸುವದರೊಂದಿಗೆ ಪ್ರಕರಣದ ತನಿಖೆಗೆ ಸಹಕಾರ ಕೋರಿದ್ದಾರೆ. ಆ ಮೇರೆಗೆ ಕೊಡಗು ಪೊಲೀಸ್ ಅಪರಾಧ ಪತ್ತೆದಳವು ಮಾಹಿತಿ ಕಲೆಹಾಕಿದೆ.

ಸುಳ್ಯದ ಸಿ.ಸಿ. ಕ್ಯಾಮರದಲ್ಲಿ ಲಭ್ಯವಾದ ಸುಳಿವಿನ ಪ್ರಕಾರ ದುಷ್ಕøತ್ಯಕ್ಕೆ ಬಳಸಲಾದ ಕಾರು ಪುಟಾಣಿ ನಗರದ ಹರೀಶ್ ಎಂಬಾತನಿಗೆ ಸಂಬಂಧಿಸಿದ್ದೆಂದು ಖಾತರಿಯಾಗಿದೆ. ಹೀಗಾಗಿ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರೊಂದಿಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಹಾಗೂ ಸಿಬ್ಬಂದಿ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿ ರವಿ ಹತ್ಯೆಯ ರಹಸ್ಯ ಬಯಲಾಗಿದೆ. ಚಾಮುಂಡೇಶ್ವರಿ ನಗರದಲ್ಲಿ ರವಿ ಮನೆಯಿಂದ ಅನತಿ ದೂರದಲ್ಲಿರುವ ಪ್ರಮುಖ ಆರೋಪಿ ಡಾಲು ಈ ದುಷ್ಕøತ್ಯದ ಸೂತ್ರದಾರಿಯೆಂದು ಗೊತ್ತಾಗಿದೆ.

ಆ ಮೇರೆಗೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಡಾಲು ಮತ್ತು ದುಷ್ಕøತ್ಯಕ್ಕೆ ಸಹಕರಿಸಿದ ಡಿಸ್ಕ್ ಅಲಿಯಾಸ್ ಪ್ರಮೋದ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಯ ಸೂತ್ರದಾರಿ ಡಾಲು ನೀಡಿದ ಸುಳಿವಿನ ಮೇರೆಗೆ ಇಂದು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಹಾಗೂ ತಂಡ ಇಲ್ಲಿನ ಅಪರಾಧ ಪತ್ತೆದಳದ ಪೊಲೀಸರ ಸಹಕಾರದೊಂದಿಗೆ ತಾಲೂಕು ದಂಡಾಧಿಕಾರಿಗಳ ಸಮಕ್ಷಮ ದುಷ್ಕøತ್ಯದ ಸ್ಥಳ ಮಹಜರು ನಡೆಸಿದರು. ಈ ಸಂದರ್ಭ ಕೊಲೆ ಆರೋಪಿ ಡಾಲು ತೋರಿಸಿದ ಜಾಗವನ್ನು ಪರಿಶೀಲಿಸಲಾಗಿ ನಗರದಿಂದ ಮೂರ್ನಾಲ್ಕು ಕಿ.ಮೀ. ದೂರದ ಸ್ಟೋನ್‍ಹಿಲ್ ರಸ್ತೆ ಬದಿ ಪ್ರಪಾತದ ಕಾಡಿನೊಳಗೆ ರವಿಯ ಶವವನ್ನು ಹೂತು ಹಾಕಿದ್ದು ಪತ್ತೆಯಾಯಿತು.

ಮಡಿಕೇರಿ ತಾಲೂಕು ದಂಡಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿ ಮಹೇಶ್ ಹಾಗೂ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಮತ್ತು ಸುಳ್ಯ ಪಂಚಾಯಿತಿ ಪ್ರತಿನಿಧಿಗಳ ಸಮಕ್ಷಮ ಪೊಲೀಸರು ರವಿಯ ಶವವನ್ನು ಹೊರತೆಗೆಸಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವ ಮೂಲಕ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಈ ವೇಳೆ ಮೃತ ರವಿಯ ಸಹೋದರ ಪ್ರಕಾಶ್ ಹಾಗೂ ಇತರರು ಹಾಜರಿದ್ದರು. ದುಷ್ಕøತ್ಯದ ಸುಳಿವು ಪಡೆದ ನೂರಾರು ಮಂದಿ ಕುತೂಹಲದಿಂದ ಜಮಾಯಿಸಿದ್ದರು. ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿರುವ ಆರೋಪಿಗಳಲ್ಲದೆ, ದುಷ್ಕøತ್ಯದಲ್ಲಿ ಕೆಲವರು ಭಾಗಿಯಾಗಿರುವ ಶಂಕೆಯೊಂದಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ಸತೀಶ್ ಕುಮಾರ್ ಖಚಿತಪಡಿಸಿದ್ದಾರೆ.

ಅಂದಾಜು 100 ಮೀ. ಪ್ರಪಾತದೊಳಗೆ ಕಾಡಿನ ನಡುವೆ ರವಿಯ ಶವ ಮಹಜರು ನಡೆಸುವ ಸಂದರ್ಭ ಗುಡುಗು ಸಹಿತ ಮಳೆಯಾದ ಪರಿಣಾಮ ಮಾಧ್ಯಮ ಮಿತ್ರರು, ಪೊಲೀಸ್ ಬಳಗ ಹಾಗೂ ವೈದ್ಯರ ಸಹಿತ ಸಾರ್ವಜನಿಕರು ಪರದಾಡುವಂತಾಯಿತು. ಕಾಡಿನೊಳಗಿನ ಪ್ರಪಾತದಿಂದ ರಸ್ತೆಗೆ ದುರ್ದೈವಿ ರವಿಯ ಶವವನ್ನು ಹೊರತರಲು ಕೂಡ ಹರಸಾಹಸ ಪಡಬೇಕಾಯಿತು.