ಸೋಮವಾರಪೇಟೆ, ಏ. 7: ಸೋಮವಾರಪೇಟೆ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಮಟ್ಟಿಗೆ ಪೊಲೀಸರಿಗಿಂತ ಕಳ್ಳರೇ ಚುರುಕಾಗಿ ದ್ದಾರೆ. ದಿನನಿತ್ಯ ಒಂದಿಲ್ಲೊಂದು ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದೆ.

ಕಳೆದ ಕೆಲ ತಿಂಗಳುಗಳಿಂದ ಸೋಮವಾರಪೇಟೆ ನಗರ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಕಳ್ಳರ ಕಮಾಲ್ ನಡೆಯುತ್ತಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಬಾಲಮುದುರಿಕೊಂಡಿದ್ದ ಕಳ್ಳರು ಇದೀಗ ಕಳ್ಳತನಕ್ಕಿಳಿದಿದ್ದು, ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸೋಮವಾರಪೇಟೆ ನಗರದಿಂದಲೇ ಮೂರು ಬೈಕ್‍ಗಳು ಕಳ್ಳತನವಾಗಿದ್ದರೆ, ಹಲವಷ್ಟು ಮನೆಗಳ ಬೀಗ ಒಡೆದು ಚಿನ್ನಾಭರಣ, ನಗದು ಹಣ ದೋಚಲಾಗಿದೆ. ಆದರೂ ಸಹ ಒಬ್ಬನೇ ಒಬ್ಬ ಕಳ್ಳನನ್ನು ಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ.

ಕಳೆದ ಎರಡು ತಿಂಗಳಿನಿಂದ ಹಲವಷ್ಟು ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಅಬ್ಬೂರುಕಟ್ಟೆಯ ವಿಜಯ ಬ್ಯಾಂಕ್‍ನಲ್ಲಿ ಡಿ ದರ್ಜೆ ನೌಕರರಾಗಿರುವ ಜಯಮ್ಮ ಎಂಬವರ ಮನೆಗೆ ನುಗ್ಗಿದ ಕಳ್ಳರ ತಂಡ ಬರೋಬ್ಬರಿ 4.25 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಮಧ್ಯಾಹ್ನದ ಸಮಯ ಮನೆಯ ಹಿಂಬಾಗಿಲನ್ನು ಒಡೆದು ಕಳ್ಳತನ ಮಾಡಲಾಗಿದ್ದು, ಸೋಮವಾರ ಪೇಟೆಯ ಪೊಲೀಸರಿಗೆ ದೂರು ನೀಡಿದ್ದರೂ ಕಳ್ಳರ ಪತ್ತೆಯಾಗಿಲ್ಲ. ಇದಾದ ಕೆಲ ದಿನಗಳ ನಂತರ ಹೊನವಳ್ಳಿ ಗ್ರಾಮ ಎಚ್.ಎನ್. ಮಹೇಶ್ ಮತ್ತು ಎಚ್.ಎನ್. ಮಂಜುನಾಥ್ ಮನೆಗೆ ನುಗ್ಗಿದ ಕಳ್ಳರು 12 ಸಾವಿರ ರೂ. ನಗದು ಹಾಗೂ 4 ಗ್ರಾಂ ಚಿನ್ನ ಮತ್ತು ಮಂಜುನಾಥ್ ಅವರ ಮನೆಯಲ್ಲಿ 10 ಸಾವಿರ ನಗದು, 4 ಗ್ರಾಂನ ಚಿನ್ನದ ಸರ ಕಳವು ಮಾಡಿದ್ದಾರೆ.

ಇಲ್ಲೂ ಕೂಡ ಹಿಂಬಾಗಿಲನ್ನು ಹಾರೆಯಿಂದ ಮೀಟಿ ಒಳ್ಳನುಗ್ಗಿ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಫೆ. 16ರಂದು ಪ್ರಕರಣ ದಾಖಲಾಗಿದೆ. ಪಟ್ಟಣದ ಜನತಾ ಕಾಲೋನಿಯಲ್ಲಿ ಶುಭಾಕರ್ ಎಂಬವರ ಬೈಕ್ ಕಳ್ಳತನವಾಗಿದೆ. ಇತ್ತೀಚೆಗೆ ಕರ್ಕಳ್ಳಿಯ ಶಿವಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ 8 ಸಾವಿರ ರೂ. ನಗದನ್ನು ಕಳವು ಮಾಡಿದ್ದಾರೆ.

ಕಳೆದ ವಾರವಷ್ಟೇ ಜನತಾ ಕಾಲೋನಿಯ ಚೌಡೇಶ್ವರಿ ದೇವಸ್ಥಾನದ ಬಳಿ ಮಧ್ಯರಾತ್ರಿ ಹೊಂಚು ಹಾಕುತ್ತಿದ್ದ ಕಳ್ಳನನ್ನು ಸ್ಥಳೀಯ ನಿವಾಸಿ ಸುಧಾಕರ್ ಎಂಬವರು ಪ್ರಶ್ನಿಸಿದ್ದು, ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅನತಿ ದೂರದಲ್ಲಿ ನಿಲ್ಲಿಸಲಾಗಿದ್ದ ಈತನ ಬೈಕ್‍ನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಬೈಕ್‍ನಲ್ಲಿ ದೊರೆತ ದಾಖಲೆ ಪತ್ರಗಳು ವೀರಾಜಪೇಟೆಯ ವ್ಯಕ್ತಿಯೋರ್ವರಿಗೆ ಸೇರಿದ್ದಾಗಿದೆ. ಈ ಬಗ್ಗೆ ಪೊಲೀಸರು ನಿರೀಕ್ಷಿತ ವೇಗದಲ್ಲಿ ತನಿಖೆ ನಡೆಸು ತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಇದರೊಂದಿಗೆ ಆಲೇಕಟ್ಟೆ ರಸ್ತೆಯ ಜಯರಾಂ ಮತ್ತು ರಾಮಚಂದ್ರ ಅವರುಗಳ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಅವ್ಯಾಹತವಾಗಿದ್ದರೂ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ವಿಫಲರಾಗುತ್ತಿದ್ದಾರೆ. ಇದು ಮುಂದು ವರೆದರೆ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವದಾಗಿ ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ಅಧ್ಯಕ್ಷ ಸತೀಶ್ ಹಾಗೂ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

- ವಿಜಯ್