ಕುಶಾಲನಗರ/ ಕೂಡಿಗೆ ಏ. 8: ಗ್ರಾಮೀಣ ಭಾಗದ ಜನತೆಯಲ್ಲಿ ಪ್ರೀತಿ, ವಾತ್ಸಲ್ಯ, ಮಾನವೀಯ ಗುಣಗಳು ಹಚ್ಚಹಸಿರಾಗಿ ಉಳಿದುಕೊಂಡಿರುವದು ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಸಂತಸ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕು ಕರ್ನಾಟಕ ಜಾನಪದ ಪರಿಷತ್ ಹಾಗೂ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾಂತ್ರಿಕತೆ ಹಾಗೂ ಸ್ಪರ್ಧಾತ್ಮಕತೆಯ ಭರಾಟೆಯಲ್ಲಿ ಪಟ್ಟಣದ ಜನರು ಮಾನವೀಯತೆ ಕಳೆದುಕೊಳ್ಳುತ್ತಿರುವದು ವಿಷಾದಕರ ಸಂಗತಿ. ಭಾಷೆ, ಜಾತಿ, ಧರ್ಮಗಳ ನೆಲೆಗಟ್ಟಿನಲ್ಲಿ ಜೀವನವನ್ನು ರೂಪಿಸಿ ಕೊಳ್ಳುವ ಮೊದಲು ಪ್ರತಿಯೊಬ್ಬರೂ ಭಾರತೀಯರು ಎಂಬ ಮನೋಭಾವನೆ ಹೊಂದುವದು ಅಗತ್ಯವಾಗಿದೆ. ದೇಶದ ಆಚಾರ, ವಿಚಾರಗಳು, ಕಲೆ, ಸಂಸ್ಕøತಿ, ಆಹಾರ ಪದ್ಧತಿಗಳನ್ನು ಗ್ರಾಮೀಣ ಜನತೆ ಉಳಿಸಿ ಬೆಳೆಸಿಕೊಂಡು ಬರುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸಾಹಿತಿ ಕಣಿವೆ ಭಾರದ್ವಾಜ್ ಆನಂದತೀರ್ಥ ಅವರು ಜಾನಪದ ಜಾತ್ರೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ನಾಟಿವೈದ್ಯ ಹಕ್ಕೆ ಗ್ರಾಮದ ಮಂಜುನಾಥ್ ಹಾಗೂ ಕಣಿವೆಯ ಜಾನಪದ ಹಿರಿಯ ಕಲಾವಿದ ಹರದಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಲಯ ಸಮಿತಿ ಅಧ್ಯಕ್ಷÀ ಕೆ.ಎನ್. ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಜನತೆಯಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡುವದರೊಂದಿಗೆ ಕಲೆಗಳನ್ನು ಪ್ರೋತ್ಸಾಹಿಸುವದು ಸಂಘಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಈ ಸಂದರ್ಭ ತಬಲ ಗಿನ್ನಿಸ್ ದಾಖಲೆ ಖ್ಯಾತಿಯ ವಿಜಯಕುಮಾರ್, ಹರದಯ್ಯ ಅವರಿಂದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಚಿ ಸಂಪತ್ ಕುಮಾರ್, ರಾಮಲಿಂಗೇಶ್ವರ ದೇವಾಲಯ ಸಮಿತಿ ಗೌರವಾಧ್ಯಕ್ಷ ಇ.ಎಸ್.ಗಣೇಶ್, ಕಾರ್ಯದರ್ಶಿ ಟಿ.ಎನ್. ಶೇಷಾಚಲ, ಪರಿಷತ್ ಉಪಾಧ್ಯಕ್ಷ ಭರಮಣ್ಣ ಬೆಟಗೇರಿ, ಪ್ರಮುಖರಾದ ಫ್ಯಾನ್ಸಿ ಮುತ್ತಣ್ಣ, ಸಮಿತಿ ಸದಸ್ಯರು ಇದ್ದರು.
ಪತ್ರಕರ್ತ ಕೆ.ಕೆ. ನಾಗರಾಜಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಪರಿಷತ್ ತಾಲೂಕು ಕಾರ್ಯದರ್ಶಿ ವಿನೋದ್ ವಂದಿಸಿದರು.