ಪೊನ್ನಂಪೇಟೆ, ಏ. 8: ಜೀವನದಲ್ಲಿ ಛಲ ಮತ್ತು ಸಮಯ ಪ್ರಜ್ಞೆ ಇದ್ದಲ್ಲಿ ಗುರಿ ಮತ್ತು ಯಶಸ್ಸನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರು ತನ್ನ ಗುರಿ ಸಾಧಿಸುವಲ್ಲಿ ಸತತ ಪ್ರಯತ್ನ, ಪರಿಶ್ರಮ ಪಡಬೇಕಾಗುವದು. ಈ ನಿಟ್ಟಿನಲ್ಲಿ ಪೆಮ್ಮಂಡ ಅಪ್ಪಯ್ಯ ಓರ್ವ ಮಾದರಿ ವ್ಯಕ್ತಿಯಾಗಿದ್ದಾರೆ. ಇವರ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಕಾಟಿಮಡ ಜಿಮ್ಮಿ ಅಣ್ಣಯ್ಯ ಅವರು ವಿಷಾದ ವ್ಯಕ್ತಪಡಿಸಿದರು.
ಅಂತರ್ರಾಷ್ಟ್ರೀಯ ಓಟಗಾರ ಪೆಮ್ಮಂಡ ಅಪ್ಪಯ್ಯ ಅವರ 75ನೇ ವರ್ಷದ ಹುಟ್ಟು ಹಬ್ಬವನ್ನು ಇಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸರಳವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋದಸ್ವರೂಪಾನಂದಜೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೆಮ್ಮಂಡ ಅಪ್ಪಯ್ಯ ಓರ್ವ ಛಲಗಾರ, ಸಾಧಕ, ಇಂದಿನ ಯುವ ಪೀಳಿಗೆಗೆ ಒಬ್ಬ ಮಾದರಿ ವ್ಯಕ್ತಿ. ಇವರ ಸಾಧನೆಗೆ ಪ್ರತಿಯೊಬ್ಬರು ಗೌರವಿಸಿ, ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕಾಳಿಮಡ ಮೋಟಯ್ಯ ನಿರೂಪಿಸಿದರು. ಅಪ್ಪಯ್ಯ ಅವರ ಪತ್ನಿ ನಿವೃತ್ತ ಶಿಕ್ಷಕಿ, ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಮಾಯಮ್ಮ ವಂದಿಸಿದರು. ಕಾರ್ಯ ಕ್ರಮದಲ್ಲಿ ವಕೀಲರಾದ ಮತ್ರಂಡ ಅಪ್ಪಚ್ಚು, ಚೊಟ್ಟೆಕಾಳಪಂಡ ಉತ್ತಯ್ಯ, ಬಲ್ಲಡಿಚಂಡ ಉತ್ತಯ್ಯ, ಕೆ.ಆರ್. ಪೇಟೆಯ ದೇವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.