ಮಡಿಕೇರಿ, ಏ. 8: ನಿನ್ನೆ ವೀರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ತಾರಿಕಟ್ಟೆಯಲ್ಲಿ ನಕಲಿ ಆಧಾರ್ ಕಾರ್ಡ್ ನೋಂದಣಿ ಜಾಲ ಬೆಳಕಿಗೆ ಬಂದಿರುವ ಬೆನ್ನಲ್ಲೇ ಇಂತಹ ದಂಧೆ ಸಕಲೇಶಪುರ ಸೇರಿದಂತೆ ಬೇರೆ - ಬೇರೆ ಕಡೆಗಳಲ್ಲಿ ತೋಟ ಕಾರ್ಮಿಕರಾಗಿರುವ ಹೊರ ರಾಜ್ಯದ ಶಂಕಿತರಿಗೆ ನಕಲಿ ಕಾರ್ಡ್‍ಗಳನ್ನು ತಯಾರಿಸಿರುವ ಸುಳಿವು ಲಭಿಸಿದೆ.ಈ ಸಂಬಂಧ ತನಿಖೆ ನಡೆಸುತ್ತಿರುವ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಜಯರಾಂ ಅವರು, ಇಂದು ಸಕಲೇಶಪುರ ಉಪವಿಭಾಗದ ಅಧಿಕಾರಿ ಹಾಗೂ ತಹಶೀಲ್ದಾರರಿಗೆ ಪತ್ರ ರವಾನಿಸಿದ್ದು, ಮುಂದಿನ ಕ್ರಮಕ್ಕೆ ಕೋರಿದ್ದಾರೆ. ಕಳೆದೆರಡು ದಿನಗಳಲ್ಲಿ ದೇವರಪುರದ ಮನೆಯೊಂದರಲ್ಲಿ ಅಡಗಿದ್ದ ಆರೋಪಿಗಳು, ಅಸ್ಸಾಂ ಮೂಲದವರೆನ್ನಲಾದ ಸುಮಾರು 48 ಮಂದಿಯಿಂದ ಹಣ ಪಡೆದು ‘ಆಧಾರ್' ನೀಡಲು ನಕಲಿ ದಾಖಲೆಗಳನ್ನು ಸಿದ್ಧಗೊಳಿಸಿರುವದು ಖಚಿತಪಟ್ಟಿದೆ.
ಅಲ್ಲದೆ, ಆರೋಪಿಗಳು ತಯಾರಿಸಿರುವ ನಕಲಿ ಆಧಾರ್ ಕಾರ್ಡ್‍ಗಳ ಅಧಿಕೃತ ನೋಂದಾವಣೆಗಾಗಿ ಕೇಂದ್ರ ಸರಕಾರದ ಸಂಬಂಧಪಟ್ಟ ‘ಕೋಡ್' ಸಂಖ್ಯೆಗೆ ಕಂಪ್ಯೂಟರ್ ಮೂಲಕ ರವಾನಿಸಿ, ಕಾರ್ಮಿಕರ
(ಮೊದಲ ಪುಟದಿಂದ) ಹೆಸರು ಸೇರ್ಪಡೆಗೆ ಸಂಚು ರೂಪಿಸಿದ್ದು, ಆ ಮುನ್ನವೇ ಸಂಬಂಧಪಟ್ಟ ಸ್ವತ್ತು ಪೊಲೀಸ್ ವಶವಾಗಿರುವ ವಿಶ್ವಾಸವಿದೆ.
ಒಂದು ವೇಳೆ ಕೇಂದ್ರ ಸರಕಾರದ ಅಧಿಕೃತ ನೋಂದಣಿ ಕೋಡ್ (ಯುಐಡಿ ಕೋಡ್) ಸರ್ವರ್‍ಗೆ ಸಂಪರ್ಕಗೊಂಡಿದ್ದರೆ, ಮುಂದಿನ 15 ದಿನಗಳಲ್ಲಿ 48 ಮಂದಿಗೂ ಅಂಚೆ ಮೂಲಕ ಆಧಾರ್ ರವಾನೆಯಾಗುವ ಸಂಭವವಿತ್ತು.
ಏಜೆನ್ಸಿಗೆ ಮೋಸ
ಹಾಸನದ ಮಂಜುನಾಥ ಎಂಬ ವ್ಯಕ್ತಿ ಆಧಾರ್ ಏಜೆನ್ಸಿ ಹೊಂದಿದ್ದು, ಆತನ ಕೈಕೆಳಗೆ ಆರೋಪಿಗಳಾದ ದುದ್ದ ಗ್ರಾಮದ ನವೀನ್, ಪ್ರಸನ್ನ ಹಾಗೂ ಬಾಳುಪೇಟೆಯ ಗುರುಪ್ರಸಾದ್ ಕೆಲಸ ನಿರ್ವಹಿಸುತ್ತಿದ್ದು, ಈ ಮಂದಿ ಅಸ್ಸಾಂ ಮೂಲದ ಮುನ್ನನೊಂದಿಗೆ ಶಾಮೀಲಾಗಿ ದಂಧೆಯಲ್ಲಿ ತೊಡಗಿದ್ದಾರೆ.
ಖಲೀಮುಲ್ಲ ಸೂತ್ರಧಾರ
ಸಕಲೇಶಪುರ ವ್ಯಾಪ್ತಿಯ ಬಹುತೇಕ ಬಾಂಗ್ಲಾ ವಲಸಿಗರೆನ್ನಲಾದ ಅಸ್ಸಾಂ ಮೂಲದ ತೋಟ ಕಾರ್ಮಿಕರಿಗೆ ಇಂತಹ ಆಧಾರ್ ಕಾರ್ಡ್‍ಗಳನ್ನು ಮಾಡಿಸಿರುವ ಸುಳಿವಿನೊಂದಿಗೆ ಖಲೀಮುಲ್ಲ ಎಂಬಾತ ಬಂಧಿತ ಆರೋಪಿಗಳನ್ನು ಕೊಡಗಿಗೆ ಕರೆತಂದಿರುವದಾಗಿ ತಿಳಿದುಬಂದಿದೆ.
ಸಕಲೇಶಪುರ ಉಪಕರಣ
ಸಕಲೇಶಪುರ ನಾಡಕಚೇರಿಯಲ್ಲಿ ವಿಶೇಷವಾಗಿ ವಿಧವಾ ಮಹಿಳೆಯರು, ವೃದ್ಧರಿಗೆ ಕಚೇರಿಗೆ ಬರಲು ಕಷ್ಟವಿರುವ ಸಂದರ್ಭ, ಅಂತಹವರಿಗೆ ಇರುವಲ್ಲಿಗೆ ತೆರಳಿ ಆಧಾರ್ ನೋಂದಾಯಿಸಿಕೊಡಲು ಏಜೆನ್ಸಿ ಪ್ರಮುಖರು ಅನುಮತಿ ಕಲ್ಪಿಸಿದ್ದಾರೆ. ಈ ಉಪಕರಣಗಳನ್ನು ಆರೋಪಿತರು ಈಗ ದುರ್ಬಳಕೆ ಮಾಡಿಕೊಂಡಿರುವದು ಖಾತರಿಯಾಗಿದೆ. ಮಾತ್ರವಲ್ಲದೆ, ಅಸ್ಸಾಂ ಮೂಲದವರೆನ್ನಲಾಗುತ್ತಿರುವ ಕಾರ್ಮಿಕ ಕುಟುಂಬಗಳು ನೆಲೆಸಿರುವ ಕಡೆಗಳಿಗೆ ಈ ದಂಧೆಕೋರರು ತೆರಳಿ ಅಲ್ಲಲ್ಲಿ ನಕಲಿ ಆಧಾರ್ ನೋಂದಾಯಿಸಿಕೊಟ್ಟಿರುವ ಸಂಶಯ ಹುಟ್ಟಿಕೊಂಡಿದೆ.
ಬಾಡಿಗೆ ವಸ್ತುಗಳ ಸುಳಿವು
ದೇವರಪುರದ ತಾರಿಕಟ್ಟೆ ಮನೆಯಲ್ಲಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ ವಸ್ತುಗಳಲ್ಲಿ ಎರಡು ಕಂಪ್ಯೂಟರ್ ಯಂತ್ರಗಳು, ಮುದ್ರಣ ಯಂತ್ರ, ಬೆರಳಚ್ಚು ಮುದ್ರಾಯಂತ್ರ, ಸ್ಕ್ಯಾನರ್, ಪೆನ್‍ಡ್ರೈವ್ ಸಹಿತ ಜನರೇಟರ್, ಕುರ್ಚಿ ಇತ್ಯಾದಿ ಲಭಿಸಿವೆ. ಈ ಜನರೇಟರ್ ಇತ್ಯಾದಿಯನ್ನು ಪಾಲಿಬೆಟ್ಟದ ವರ್ತಕರೊಬ್ಬರಿಂದ ಪಡೆದಿದ್ದಾಗಿದೆ.
ಈ ಎಲ್ಲಾ ಮಾಹಿತಿ ಕಲೆ ಹಾಕಿರುವ ಪೊಲೀಸರು, ಆರೋಪಿಗಳು ದುಷ್ಕøತ್ಯದಲ್ಲಿ ತೊಡಗಿರುವ ಮನೆಯ ನೈಜ ಮಾಲೀಕನನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆಯಲ್ಲಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಮುಂದೆ ಆ ವ್ಯಕ್ತಿ ವಿರುದ್ಧ ಕೂಡ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುತ್ತದೆ.
ಈಗ ತಲೆಮರೆಸಿಕೊಂಡಿರುವ ಖಲೀಮುಲ್ಲ ನಿಖರವಾಗಿ ಎಲ್ಲಿಯವನು ಎಂಬ ಬಗ್ಗೆ ಬಂಧನದ ಬಳಿಕ ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿರುವ ಪೊಲೀಸ್ ತನಿಖಾಧಿಕಾರಿಗಳು, ಬಂಧಿತರ ವಿರುದ್ಧ ವಂಚನೆ ಪ್ರಕಾರ 420, ನಕಲಿ ದಂಧೆಯಡಿ 465, ಒಳಸಂಚು ಅಪರಾಧಕ್ಕಾಗಿ 120‘ಬಿ' ಹಾಗೂ ಈ ಕೃತ್ಯದಲ್ಲಿ ಭಾಗಿಯಾದವರೆಲ್ಲರೂ ಸಮಾನ ಆರೋಪಿತರೆಂಬ ರೆಡ್‍ವಿತ್ (ಆರ್‍ಡಬ್ಲ್ಯು) 34 ಅನ್ವಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.