ಶನಿವಾರಸಂತೆ, ಏ. 8: ನಾಯಿಯ ಮೇಲೆ ಆಟೋರಿಕ್ಷ ಹತ್ತಿಸಿ ಆಟೋ ಉರುಳಿ ಬಿದ್ದ ಪರಿಣಾಮ ಮೂವರಿಗೆ ಗಾಯವಾಗಿದ್ದು ಅವರಲ್ಲಿ ಓರ್ವ ಇಂದು ಹಾಸನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಂಚಾಕ್ಷರಿ (51) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಶನಿವಾರಸಂತೆಯಿಂದ ಬನ್ನಳ್ಳಿ ರಸ್ತೆಯಲ್ಲಿ ಆಟೋದಲ್ಲಿ ಬನ್ನಳ್ಳಿ ಗ್ರಾಮದ ಶಾಂತ, ಮುತ್ತಯ್ಯ ಹಾಗೂ ಪಂಚಾಕ್ಷರಿ ಎಂಬವರು ತೆರಳುತ್ತಿದ್ದರು. ಈ ಸಂದರ್ಭ ನಾಯಿಯೊಂದು ಅಡ್ಡಬಂದು ಆಟೋದ ಚಕ್ರಕ್ಕೆ ಸಿಲುಕಿದ್ದು, ಆಟೋ ರಸ್ತೆಗೆ ಉರುಳಿದೆ. ಪರಿಣಾಮ ಆಟೋದಲ್ಲಿ ಪ್ರಯಾಣಿಕರಿಗೆ ಗಾಯವಾಗಿದ್ದು, ಶಾಂತ ಅವರು ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೆ ಪಂಚಾಕ್ಷರಿ ಹಾಗೂ ಮುತ್ತಯ್ಯ ಅವರಿಗೆ ತಲೆಗೆ ತೀವ್ರ ಗಾಯಗೊಂಡು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪಂಚಾಕ್ಷರಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಟೋವನ್ನು ವಶಪಡಿಸಿಕೊಂಡಿದ್ದಾರೆ.