ಮಡಿಕೇರಿ, ಏ. 8: ಅಂಗನವಾಡಿಗಳಿಗೆ ಆಹಾರ ಪದಾರ್ಥ ಸರಬರಾಜು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ಉಪ ನಿರ್ದೇಶಕಿ ಮುಮ್ತಾಜ್ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಜನತಾ ಬಜಾರ್ ಅಧ್ಯಕ್ಷ ರವಿಬಸಪ್ಪ ಅವರು ಆಕ್ಷೇಪಿಸಿದ್ದಾರೆ. ತಾ. 6 ರ ಪತ್ರಿಕೆಯಲ್ಲಿ ಅಧಿಕಾರಿ ನೀಡಿರುವ ಸಮಜಾಯಿಷಿಕೆ ಒಪ್ಪುವಂತದ್ದಲ್ಲ ಎಂದು ಪ್ರತಿಕ್ರಿಯಿಸಿ ಹೇಳಿಕೆ ನೀಡಿರುವ ಅವರು, ತಾ. 9.7.2012 ರಂದು ಅಂದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವದೇ ಖಾಸಗಿ ವ್ಯಕ್ತಿಗಳು ಪ್ರಭಾವ ಹೊಂದಬಾರದು, ಸರಕಾರಿ ಸಂಸ್ಥೆಗಳಾದ ಟಿ.ಎ.ಪಿ.ಸಿ.ಎಂ.ಎಸ್., ಜನತಾ ಬಜಾರ್, ಎ.ಪಿ.ಎಂ.ಸಿ. ಇತರ ಸಹಕಾರ ಸಂಘಗಳ ಮೂಲಕ ಸಗಟುದರ ಮತ್ತು ಪ್ರಮಾಣದಲ್ಲಿ ಖರೀದಿಸಬೇಕೆಂದು ಆದೇಶ ನೀಡಿರುತ್ತಾರೆ. ಆ ಸಮಯದಲ್ಲಿ ಕೋರ್ ಕಮಿಟಿಯ ನಿಯಮಗಳು ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

2012 ರಿಂದ ಜನತಾ ಬಜಾರ್ ಮುಖಾಂತರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುತ್ತ ಬಂದಿದ್ದು, ಉಪ ನಿರ್ದೇಶಕರಾದ ನಾಗರಾಜು ಮತ್ತು ಮುಮ್ತಾಜ್ ಬರುವಾಗ ಈ ನಿಯಮ ಏಕೆ ಬದಲಾಗಿದೆ? ಇದರ ಉದ್ದೇಶವೇನು ಎಂದಿರುವ ಅವರು, ಎಂ.ಎಸ್.ಪಿ.ಟಿ.ಸಿ.ಯವರು ಈಗಾಗಲೇ ಹಾಸನದ ಸಗಟು ಮಾರಾಟದಾರರಿಗೆ ಮತ್ತು ಇತರ ಸಂಘ ಸಂಸ್ಥೆಗಳಿಗೆ ಸುಮಾರು 50 ಲಕ್ಷ ರೂಪಾಯಿ ಕೊಡಲು ಬಾಕಿ ಇದೆ. ಈ ಹಣಕ್ಕೆ ಮೊಕದ್ದಮೆ ನೀಡಿರುವದು ನಿಜವಷ್ಟೇ. ಈ ಹಣವನ್ನು ಅಧಿಕಾರಿ ಭರ್ತಿ ಮಾಡಲು ಸಾಧ್ಯವಿದೆಯೇ ಎಂದು ಕೇಳಿದ್ದಾರೆ.

ಪ್ರತಿ ಅಂಗನವಾಡಿಗಳಿಗೆ ಇಂಡೆಂಟ್ ನೀಡಿದಷ್ಟು ಸಾಮಗ್ರಿಗಳು ಸರಬರಾಜು ಆಗುತ್ತಿಲ್ಲ. ಅಲ್ಲಿಯು ಕೂಡ ವಂಚನೆ ನಡೆಯುತ್ತಿದೆ. ಅದನ್ನು ಪರಿಶೀಲನೆ ಮಾಡಬೇಕಾದ ಈ ಅಧಿಕಾರಿಯೇ ಸರಬರಾಜು ಮಾಡುವ ಅಧಿಕಾರಿಯಾಗಿರುತ್ತಾರೆ. ಈ ಇಲಾಖೆಯಲ್ಲಿ ಉಪನಿರ್ದೇಶಕರು ಇಲ್ಲ, ಯೋಜನಾ ಅಧಿಕಾರಿಗಳು ಇಲ್ಲ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಎಂ.ಎಸ್.ಪಿ.ಟಿ.ಸಿ.ಯವರು ಅವರೆ ಸ್ವತಃ ಖರೀದಿ ಮಾಡುತ್ತಿಲ್ಲ, ಅವರು ಕೂಡ ಸ್ಥಳೀಯವಾಗಿ ಇರುವಂತಹ ಸಹಕಾರ ಸಂಸ್ಥೆಗಳಿಂದ ಖರೀದಿ ಮಾಡುತ್ತಿದ್ದಾರೆ .

ಮಾರ್ಚ್ 25ರ ಪತ್ರಿಕೆಯಲ್ಲಿ ಮುಮ್ತಾಜ್ ಅವರು ಟೆಂಡರ್ ಕರೆಯುವ ಕುರಿತು ಪ್ರಕಟಣೆ ನೀಡಿರುತ್ತಾರೆ. ಆದರೆ ಈಗ ಎಂ.ಎಸ್.ಪಿ.ಟಿ.ಸಿ. ಸಂಘಟನೆಯವರೆ ಖರೀದಿಸಬಹುದೆಂದು ತಿಳಿಸುತ್ತಾರೆ. ಇದರ ಅರ್ಥವೇನು?

ಜವಾಬ್ದಾರಿ ಇರುವ ಅಧಿಕಾರಿ ದಿನಕ್ಕೊಂದು ತಪ್ಪು ಮಾಹಿತಿ ನೀಡುವದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೊನ್ನಂಪೇಟೆ ಎಂ.ಎಸ್.ಪಿ.ಸಿ. (ಮಹಿಳಾ ಪೌಷ್ಟಿಕ ಆಹಾರ ಉತ್ಪಾದನಾ ಹಾಗೂ ತರಬೇತಿ ಕೇಂದ್ರ) ಸ್ತ್ರೀಶಕ್ತಿ ಸದಸ್ಯರನ್ನು ಒಳಗೊಂಡಂತೆ ಸ್ಥಾಪಿಸಲಾಗಿದ್ದು, ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರಡಿ ನೋಂದಾಯಿಸಿದೆ.

ಜನತಾ ಬಜಾರ್ ಮಡಿಕೇರಿಯಂತೆಯೇ ಎಂ.ಎಸ್.ಪಿ.ಸಿ. ಸಹ ಒಂದು ಸಹಕಾರಿ ಸಂಸ್ಥೆ ಆಗಿರುತ್ತದೆ. ಎಂ.ಎಸ್.ಪಿ.ಸಿ. ಸಂಸ್ಥೆಯು ಸ್ವತಂತ್ರವಾಗಿ ಪೂರಕ ಪೌಷ್ಟಿಕ ಆಹಾರ ಸಿದ್ಧಪಡಿಸಲು ಅವಶ್ಯಕ ಆಹಾರ ಸಾಮಗ್ರಿಗಳನ್ನು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿರುತ್ತದೆ. ಇಲಾಖೆಯ ನಿರ್ದೇಶನದಂತೆ ಖರೀದಿಯಲ್ಲಿ ಯಾವದೇ ಮುಕ್ತ ಮಧ್ಯವರ್ತಿ ಇಲ್ಲದಂತೆ ನೋಡಿಕೊಳ್ಳಲು ಸಹ ನಿರ್ದೇಶನವಿರುತ್ತದೆ. ಜನತಾ ಬಜಾರ್ ಹೇಳಿಕೊಳ್ಳುವಂತೆ ಅವರಿಗೆ ಈ ಹಿಂದೆ ಎಂ.ಎಸ್.ಪಿ.ಸಿ.ಗಳಿಗೆ ಸರಬರಾಜು ಮಾಡಲು ಇಲಾಖೆ ವತಿಯಿಂದ ಆಗಲಿ ಅಥವಾ ಯಾವದೇ ಹಂತದಲ್ಲಿಯೂ ಸರಬರಾಜು ಆದೇಶ ನೀಡಿರುವದಿಲ್ಲ. ಮೊದಲು ಆರ್ಥಿಕವಾಗಿ ಸದೃಢರಲ್ಲದ ನಾವು ಸಾಲದ ಆಧಾರದ ಮೇಲೆ ಆಹಾರ ಸಾಮಗ್ರಿಗಳನ್ನು ಜನತಾ ಬಜಾರ್ ಮಡಿಕೇರಿ ಇವರಿಂದ ಖರೀದಿಸುತ್ತಿದ್ದು, ಅವರುಗಳು ಮಾರುಕಟ್ಟೆಯ ದರಗಳ ಏರಿಳಿತ ಲಾಭಾಂಶವನ್ನು ಎಂ.ಎಸ್.ಪಿ.ಸಿ.ಯೊಂದಿಗೆ ಹಂಚಿಕೊಳ್ಳದೆ ಅವರೇ ಎಲ್ಲಾ ಲಾಭಾಂಶಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣ ಹಾಗೂ ಕಳಪೆ ಆಹಾರ ಸಾಮಗ್ರಿ ಸರಬರಾಜು ಮಾಡುತ್ತಿದ್ದ ಕಾರಣ ಜನತಾ ಬಜಾರ್ ಮಡಿಕೇರಿ ಇವರಿಂದ ಖರೀದಿ ನಿಲ್ಲಿಸಿ ನೇರವಾಗಿ ಹೋಲ್‍ಸೇಲ್ (ಸಗಟು) ಮಾರಾಟ ಗಾರರಿಂದ ಸಾಲದ ಆಧಾರದ ಮೇರೆಗೆ ಖರೀದಿಸಲಾಗುತ್ತಿದೆ. ಇದರಿಂದ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಕಾಯ್ದುಕೊಂಡು ಆಹಾರ ಸಾಮಗ್ರಿಗಳ ದರಗಳ ಏರಿಳಿತದಿಂದ ಆಗುವ ಲಾಭದಿಂದ ಸಂಸ್ಥೆಗೆ ಲಾಭವು ಆಗುತ್ತದೆ.

ಎಂ.ಎಸ್.ಪಿ.ಸಿ. ಸಂಸ್ಥೆಯು ಸ್ವಂತವಾಗಿ ನೇರವಾಗಿ ಹೋಲ್‍ಸೇಲ್ (ಸಗಟು) ಮಾರಾಟಗಾರರಿಂದ ಖರೀದಿಸಲಾಗುತ್ತಿದ್ದು, ಇಲಾಖೆಯ ಯಾವದೇ ಅಧಿಕಾರಿ ಹಸ್ತಕ್ಷೇಪ ಮಾಡುತ್ತಿರುವದಿಲ್ಲ.

ಜನತಾ ಬಜಾರ್ ಮಡಿಕೇರಿ ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ಗೆ ಆಹಾರದ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ನೀಡಬಾರದಾಗಿ ಕಾಳಜಿ ವ್ಯಕ್ತಪಡಿಸುತ್ತೇವೆ ಎಂದು ಎಂ.ಎಸ್.ಪಿ.ಸಿ. (ಪೊನ್ನಂಪೇಟೆ)ಯ ಅಧ್ಯಕ್ಷೆ ಸುಧಾ ಮತ್ತು ಹೆಚ್.ಎನ್. ನೀತು ಅವರು ಜಂಟಿಯಾಗಿ ಸ್ಪಷ್ಟೀಕರಣ ನೀಡಿದ್ದಾರೆ.

ಕುಶಾಲನಗರ

ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ಉತ್ಪಾದನಾ ಸಂಸ್ಥೆಗೆ ಕಾಳುಗಳ ಖರೀದಿಗೆ ಮದ್ಯವರ್ತಿಗಳ ಅವಶ್ಯಕತೆ ಇರುವದಿಲ್ಲ ಎಂದು ಸಂಸ್ಥೆಯ ಕೂಡಿಗೆ ಘಟಕದ ಅಧ್ಯಕೆÀ್ಷ ಮೋಹನಾಕ್ಷಿ ಸ್ಪಷ್ಟಪಡಿಸಿದ್ದಾರೆ. ಜನತಾ ಬಜಾರ್ ಮೂಲಕ ಹೊರಡಿಸಿದ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಅವರು ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಯಮಾವಳಿಯಂತೆ ತಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಯಾವದೇ ಅಧಿಕಾರಿಗಳ ಮದ್ಯಸ್ಥಿಕೆಗೆ ಒಳಗಾಗದೆ ಘಟಕ ಸ್ವತಂತ್ರವಾಗಿ ಕಾಳು ಖರೀದಿ ಮಾಡುತ್ತಿರುವದಾಗಿ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಮಡಿಕೇರಿ ಜನತಾ ಬಜಾರ್‍ನಿಂದ ಕಾಳುಗಳನ್ನು ಖರೀದಿಸಿದ ಸಂದರ್ಭ ತಮ್ಮ ಘಟಕ ಸಂಪೂರ್ಣ ನಷ್ಟಕ್ಕೊಳಗಾಗಿತ್ತು. ಈ ಸಂದರ್ಭ ಅಂದಾಜು ರೂ. 20 ಲಕ್ಷಕ್ಕೂ ಅಧಿಕ ಹಣವನ್ನು ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ತದನಂತರ ಇಲಾಖಾ ನಿಯಮದಂತೆ ನಮ್ಮ ಘಟಕ ಬದಲಿ ಸಂಸ್ಥೆಯಿಂದ ಕಾಳುಗಳನ್ನು ಖರೀದಿಸುವ ಮೂಲಕ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಕೂಡಿಗೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದಿಂದ ಸರಬರಾಜಾಗುವ ಕಾಳುಗಳು ಅತ್ಯುತ್ತಮ ಗುಣಮಟ್ಟದಲ್ಲಿ ಇರುವ ಬಗ್ಗೆ ಖಾತ್ರಿಯಿದ್ದು ಇಲ್ಲಿಂದ ಸರಬರಾಜಾಗುವ ಆಹಾರ ಪದಾರ್ಥಗಳು ಯಾವದೇ ರೀತಿಯಲ್ಲಿ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿಲ್ಲ. ಪ್ರಯೋಗಾಲಯಕ್ಕೆ ಕಾಳುಗಳನ್ನು ಕಳುಹಿಸಿ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆ. ತಮ್ಮ ಘಟಕ ಖರೀದಿಸುವ ಆಹಾರ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದೆ ಎಂದಿದ್ದಾರೆ. ಆಗಾಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

2 ತಿಂಗಳಿನಿಂದ ನೂತನ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸಕ್ತ ರೂ. 29 ಲಕ್ಷ ಸಾಲದಲ್ಲಿರುವ ಘಟಕ ಈಗಾಗಲೇ ರೂ. 6 ಲಕ್ಷ ಪಾವತಿಸಲಾಗಿದೆ. ಘಟಕದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ನಿವೇದಿಸಲಾಗಿದೆ ಎಂದು ಕಾರ್ಯದರ್ಶಿ ಕವಿತಾ ಅವರು ಹೇಳಿದ್ದಾರೆ.

ಅನವಶ್ಯಕ ಹೇಳಿಕೆಗಳ ಮೂಲಕ ಘಟಕದ ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವದನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.