ಮಡಿಕೇರಿ, ಏ. 8: ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಗ್ರಾಮ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಅವರು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಸಾಧಕ ಬಾಧಕ ಗಳನ್ನು ಚರ್ಚಿಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ವಿಶೇಷ ಗ್ರಾಮ ಸಭೆ ಆಹ್ವಾನಿಸಲಾಗುತ್ತಿದೆ. ಸಾರ್ವಜನಿಕರು ವಿಶೇಷ ಗ್ರಾಮ ಸಭೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ ಎಂದು ಜಿಲ್ಲಾಡಳಿತ ಕೋರಿದ್ದು, ಈ ಕೆಳಗಿನ ವಿಷಯಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಸೂಕ್ಷ್ಮ ಪರಿಸರ ತಾಣದಲ್ಲಿ ಅನುಮತಿಸಿದ, ನಿಯಂತ್ರಿಸಿದ ಮತ್ತು ರದ್ದುಪಡಿಸಿದ ಚಟುವಟಿಕೆಗಳ ವಿವರ ಇಂತಿದೆ.
ನಿಯಂತ್ರಣ ಪ್ರಾಧಿಕಾರಿಗಳಿಂದ ಪೂರ್ವಾನುಮತಿ ಪಡೆದು ಚಟುವಟಿಕೆಗಳನ್ನು ಕೈಗೊಳ್ಳಬಹುದು. ರದ್ದುಪಡಿಸಿದ ಯಾವದೇ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ.
ಸ್ಥಳೀಯ ನಿವಾಸಿಗಳ ವಾಸದ ಅವಶ್ಯಕತೆಗನುಗುಣವಾಗಿ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆದು ಮತ್ತು ಉಸ್ತುವಾರಿ ಸಮಿತಿಯ ಶಿಫಾರಸ್ಸಿನ ಮೇರೆ ಸೂಕ್ಷ್ಮ ಪರಿಸರ ತಾಣದಲ್ಲಿ ಕೃಷಿ ಜಮೀನನ್ನು ಪರಿವರ್ತಿಸಲು ಅನುಮತಿ, ಮತ್ತು ಕೆಲವು ಚಟುವಟಿಕೆಗಳಿಗೆ ಅಂದರೆ; ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ, ಪ್ರವಾಸಿಗರ ತಾತ್ಕಾಲಿಕ ತಂಗುವಿಕೆಗಾಗಿ ಪರಿಸರ ಸ್ನೇಹಿ ಕಾಟೇಜ್‍ಗಳು, ಅಂದರೆ ಟೆಂಟ್‍ಗಳು, ಮರದ ಮನೆಗಳು ಇತ್ಯಾದಿ. ಇರುವ ರಸ್ತೆಗಳನ್ನು ಅಗಲೀಕರಿಸುವದು ಮತ್ತು ಬಲಪಡಿಸುವದು. ಪರಿಸರ ಮಾಲಿನ್ಯಕ್ಕೆ ಕಾರಣವಾಗದಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳು, ಮಳೆ ನೀರು ಕೊಯ್ಲು, ಮತ್ತು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಗೃಹ ಕೈಗಾರಿಕೆಗಳು, ಗ್ರಾಮೀಣ ಕೈಗಾರಿಕೆಗಳು.
ಪ್ರೋತ್ಸಾಹದಾಯಕ ಚಟುವಟಿಕೆಗಳು: ಹಾಲು, ಹಾಲಿಗೆ ಸಂಬಂಧಿಸಿದ ಕೃಷಿ ಸೇರಿದಂತೆ ಸ್ಥಳೀಯವಾಗಿ ಆಚರಣೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಪದ್ಧತಿಗಳು ಮಳೆನೀರು ಕೊಯ್ಲು ಸಾವಯವ ಕೃಷಿ ಗ್ರಾಮೀಣ ಕುಶಲ ಕಲೆಗಳು ಸೇರಿದಂತೆ ಗೃಹ ಕೈಗಾರಿಕೆಗಳು.
ನಿರ್ಮಾಣ ಚಟುವಟಿಕೆಗಳು: ಸ್ಥಳೀಯ ಜನರು ಅವರ ಜಾಗದಲ್ಲಿ ಅವರ ವಾಸದ ಉಪಯೋಗಕ್ಕೆ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿಸಿದೆ. ಮಾಲಿನ್ಯಕ್ಕೆ ಕಾರಣವಾಗದಂತಹ ಸಣ್ಣ ಪ್ರಮಾಣದ ಕೈಗಾರಿಕೆ ನಿರ್ಮಾಣ ಚಟುವಟಿಕೆ ನಿಯಂತ್ರಿಸಿದೆ ಮತ್ತು ಕನಿಷ್ಟ ಮಿತಿಗೊಳಪಡಿಸಿದೆ. ಅರಣ್ಯ ಅಥವಾ ಸರ್ಕಾರಿ ಅಥವಾ ಕಂದಾಯ ಅಥವಾ ಖಾಸಗಿ ಜಮೀನುಗಳಲ್ಲಿನ ಮರಗಳನ್ನು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕಡಿಯುವಂತಿಲ್ಲ
ಅಂತರ್ಜಲ ಕೊಯ್ಲು ಸೇರಿದಂತೆ ವಾಣಿಜ್ಯ ಜಲ ಸಂಪನ್ಮೂಲಗಳು: ಭೂ ಮಾಲೀಕರು ಗೃಹ ಬಳಕೆಗೆ ಮತ್ತು ಸ್ವಂತ ಕೃಷಿ ಉಪಯೋಗಕ್ಕೆ ಮಾತ್ರ ಮೇಲ್ಮೈ ನೀರು ಮತ್ತು ಅಂತರ್ಜಲವನ್ನು ಬಳಸಲು ಅನುಮತಿಸಿದೆ. ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ನಿಯಮಗಳಿ ಗನುಗುಣವಾಗಿ ವಾಣಿಜ್ಯ ಉದ್ಧೇಶಿತ ವಾಹನ ಸಂಚಾರ ನಿಯಂತ್ರಿಸಿದೆ.
ಮಾಲಿನ್ಯಕ್ಕೆ ಕಾರಣವಲ್ಲದ ಸಣ್ಣ ಪ್ರಮಾಣದ ಕೈಗಾರಿಕೆಗಳು: ಮಾಲಿನ್ಯ ರಹಿತ, ಅಪಾಯ ರಹಿತ, ಸಣ್ಣ ಪ್ರಮಾಣದ ಸೇವಾ ಕೈಗಾರಿಕೆ, ಕೃಷಿ, ಪುಷ್ಪ ಕೃಷಿ, ತೋಟಗಾರಿಕೆ ಅಥವಾ ಸೂಕ್ಷ್ಮ ಪರಿಸರ ತಾಣದಿಂದ ಬುಡಕಟ್ಟು ವಸ್ತುಗಳನ್ನು ಉತ್ಪಾದಿಸುವ ಕೃಷಿ ಆಧಾರಿತ ಕೈಗಾರಿಕೆ, ಮತ್ತು ಪರಿಸರಕ್ಕೆ ಮಾರಕವಾಗದಂತಹ ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಅನುಮತಿಸಿದೆ.
ಸೂಕ್ಷ್ಮ ಪರಿಸರ ತಾಣದಲ್ಲಿ ಮನೋರಂಜನಾ ಉದ್ಧೇಶಕ್ಕಾಗಿ ಗುರುತಿಸಲಾದ ಅರಣ್ಯ, ತೋಟಗಾರಿಕಾ ಕ್ಷೇತ್ರ, ಕೃಷಿ ಕ್ಷೇತ್ರ, ಉದ್ಯಾನವನ ಮತ್ತು ಇತರೆ ತೆರೆದ ಜಾಗಗಳನ್ನು ವಾಣಿಜ್ಯ ಅಥವಾ ಕೈಗಾರಿಕಾ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ಉಪಯೋಗಿಸ ಬಾರದು ಅಥವಾ ಪರಿವರ್ತಿಸ ಬಾರದು. ವಾಣಿಜ್ಯ, ಗಣಿಗಾರಿಕೆ, ಕಲ್ಲುಕೋರೆ ಮತ್ತು ಕ್ರಷಿಂಗ್ ಘಟಕಗಳು ಸಾಮಿಲ್‍ಗಳ ನಿರ್ಮಾಣ, ಜಲ, ವಾಯು, ಮಣ್ಣು, ಶಬ್ದ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ನಿರ್ಮಾಣ ವಾಣಿಜ್ಯ ಉದ್ಧೇಶದ ಉರುವಲು ಹೊಸ ಪ್ರಧಾನ ಹೈಡ್ರೋ-ಎಲೆಕ್ಟ್ರಿಕ್ ಯೋಜನೆ ಮತ್ತು ನೀರಾವರಿ ಯೋಜನೆಗಳು ಕಂಪೆನಿಗಳು, ನಿಗಮಗಳು ಸ್ಥಾಪಿಸುವ ಬೃಹತ್ ಪ್ರಮಾಣದ ವಾಣಿಜ್ಯ ಉದ್ದೇಶಿತ ಜಾನುವಾರು ಮತ್ತು ಕೋಳಿ ಸಾಕಣೆ ಕೇಂದ್ರಗಳು (ಸ್ಥಳೀಯ ರೈತರಿಂದ ಸಣ್ಣ ಪ್ರಮಾಣದಲ್ಲಿ ಕೈಗೊಳ್ಳಲು ಅನುಮತಿಸಿದೆ) ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ಮತ್ತು ಘನ ತ್ಯಾಜ್ಯಗಳನ್ನು ನೈಸರ್ಗಿಕ ನೀರಿನ ಮೂಲ ಅಥವಾ ಭೂಮಿಗೆ ವಿಸರ್ಜಿಸುವದು. ಈ ಕುರಿತು ಗ್ರಾಮ ವಾಸಿಗಳು ಅರಿತುಕೊಳ್ಳಬೇಕೆಂದು ಜಿಲ್ಲಾಡಳಿತ ಗಮನ ಸೆಳೆದಿದೆ.