ಶನಿವಾರಸಂತೆ, ಏ. 8: ಬೆಸೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಭಂಡಾರ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ ಸುಮಾರು 8-10 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದ ಮಹಿಳೆಯರಿಂದ ನೀರಿನ ಸಿಸ್ಟನ್ ಮುಂಭಾಗ ಖಾಲಿ ಬಿಂದಿಗೆಗ ಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.

ಚಿಕ್ಕ ಭಂಡಾರ ಗ್ರಾಮದಲ್ಲಿ ಸುಮಾರು 110 ಕುಟುಂಬಗಳು ವಾಸಿಸುತ್ತಿದ್ದು, ಒಂದು ಬೋರ್‍ವೆಲ್ ಇದ್ದು, ಸಿಸ್ಟನ್ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಅವರ ಪತಿ ಸುರೇಶ್ ನೀರು ನಿರ್ವಾಹಕರ ಕೆಲಸ ಮಾಡುತ್ತಿದ್ದು, ಗ್ರಾಮಸ್ಥರು ನೀರು ಬಿಡುವಂತೆ ಕೇಳಿಕೊಂಡರೂ ಗ್ರಾಮಸ್ಥರ ಮಾತಿಗೆ ಬೆಲೆ ಕೊಡದೆ ಅಸಡ್ಡೆಯಿಂದ ವರ್ತಿಸಿದರು ಎನ್ನಲಾಗಿದೆ.

ಗ್ರಾಮಸ್ಥರು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಪಂಚಾಯಿತಿ ಗಮನ ಹರಿಸಲಿಲ್ಲ ಹಾಗೂ ಜಿ.ಪಂ. ಸದಸ್ಯ ಪುಟ್ಟರಾಜು ಪಂಚಾಯಿತಿಯ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾ ಯಿತು. ಈ ಸಂದರ್ಭ ಗ್ರಾಮಸ್ಥರಾದ ಗೌರಮ್ಮ, ಚಂದ್ರಚಾರ್, ಶಿವಮ್ಮ, ಪುಷ್ಪ, ಮಣಿಯಮ್ಮ, ಇತರರು ಹಾಜರಿದ್ದರು.

ಸ್ಥಳದಲ್ಲಿದ್ದ ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಸುರೇಶ್ ಅವರಿಂದ ‘ಶಕ್ತಿ' ಮಾಹಿತಿ ಬಯಸಿದಾಗ ಅವರು ಮಾತನಾಡಿ, ವಿದ್ಯುತ್ ಸಮಸ್ಯೆ ಇದೆ. ನೀರು ಸರಬರಾಜು ಮೀಟರ್ ಅಳವಡಿಸಿ 20 ವರ್ಷಗಳಾಗಿದ್ದು, ಬೋರ್‍ವೆಲ್‍ನಲ್ಲಿ ನೀರು ಕಡಿಮೆಯಾಗಿದೆ. ವಿದ್ಯುತ್ ಸಮಸ್ಯೆ ಇದ್ದು, 20 ದಿನಗಳೊಳಗೆ ಹೊಸ ಟಿ.ಸಿ. ಅಳವಡಿಸಿಕೊಡುತ್ತೇವೆ ಎಂದು ವಿದ್ಯುತ್ ಇಲಾಖೆಯ ಜೆ.ಇ. ತಿಳಿಸಿರುತ್ತಾರೆ ಎಂದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ರಂಗಸ್ವಾಮಿ ಹಾಗೂ ಕಲ್ಪನ ಸಮಸ್ಯೆಯನ್ನು ಸದ್ಯದಲ್ಲೇ ಬಗೆಹರಿಸುತ್ತೇವೆ ಎಂದು ಉತ್ತರಿಸಿದರು.